ADVERTISEMENT

ಕಾಂಗ್ರೆಸ್, ಬಿಜೆಪಿ ನಾಮಪತ್ರ ಸಲ್ಲಿಕೆ ಇಂದು

ನಂಜನಗೂಡು ಉಪಚುನಾವಣೆ; ಕ್ಷೇತ್ರಕ್ಕೆ ಸಚಿವರು, ವಿವಿಧ ಪಕ್ಷಗಳ ಮುಖಂಡರ ಭೇಟಿ, ಪ್ರಚಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 9:13 IST
Last Updated 20 ಮಾರ್ಚ್ 2017, 9:13 IST

ನಂಜನಗೂಡು: ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಮಾರ್ಚ್ 20ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಕಳಲೆ ಕೇಶವಮೂರ್ತಿ ಅವರು ಬೆಳಿಗ್ಗೆ 10 ಗಂಟೆಗೆ ನಗರದ ಚಿಂತಾಮಣಿ ಗಣಪತಿ ದೇವಾಲಯದಿಂದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ ಹಾಗೂ ಕಾರ್ಯಕರ್ತರೊಂದಿಗೆ ರೋಡ್ ಷೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.

ವಿ.ಶ್ರಿನಿವಾಸಪ್ರಸಾದ್ ಅವರು ಮಧ್ಯಾಹ್ನ 12 ಗಂಟೆಗೆ ಚಿಂತಾಮಣಿ ಗಣಪತಿ ದೇವಾಲಯದಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಹಾಗೂ ಕಾರ್ಯಕರ್ತರೊಂದಿಗೆ ರೋಡ್ ಷೋ ನಡೆಸಿದ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ನಿಯಂತ್ರಣ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಮಹದೇವು ಮನೆಯಲ್ಲಿ ಗೋಪ್ಯ ಚರ್ಚೆ
ನಂಜನಗೂಡು:
ನಗರದಲ್ಲಿರುವ ಎಂ.ಮಹದೇವು ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಆರ್.ಧ್ರುವ ನಾರಾಯಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

ಮಹದೇವು ಪತ್ನಿ ರಾಜಮ್ಮ ಅವರ ಕಾಲಿಗೆ ನಮಸ್ಕರಿಸಿದ ಕಳಲೆ ಕೇಶವಮೂರ್ತಿ ಅವರು ಬೆಂಬಲ ಹಾಗೂ ಆಶೀರ್ವಾದ ಕೋರಿದರು. ನಂತರ ಸಚಿವರು ಕೇಶವ ಮೂರ್ತಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ರಾಜಮ್ಮ ಅವ ರೊಂದಿಗೆ ಸುಮಾರು ಅರ್ಧ ಗಂಟೆ ಗೋಪ್ಯವಾಗಿ ಸಮಾಲೋಚನೆ ನಡೆಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.

‘ಇದೊಂದು ಸೌಹಾರ್ದಯುತ ಭೇಟಿ. ಮಹದೇವಣ್ಣ ಮತ್ತು ನಾನು ಉತ್ತಮ ಒಡನಾಟ ಹೊಂದಿದ್ದೆವು. ಬೇರೆಬೇರೆ ಪಕ್ಷದಲ್ಲಿದ್ದರೂ ಆತ್ಮೀಯತೆ ಇತ್ತು.
ನಗರದ ಬಸವನಗುಡಿ ಬಡಾವಣೆ ಯಲ್ಲಿ ಮತಯಾಚನೆ ಸಂದರ್ಭದಲ್ಲಿ ಸೌಜನ್ಯಯುತವಾಗಿ ಭೇಟಿ ನೀಡಿ ಬೆಂಬಲ ನೀಡುವಂತೆ ಕೋರಿದ್ದೇನೆ. ರಾಜಮ್ಮ ಅವರಿಗೆ ಈಗಿನ ಪರಿಸ್ಥಿತಿಯ ಅರಿವಿದೆ. ರಾಜಮ್ಮ ಮಹದೇವು ಜತೆ ಆತ್ಮೀಯತೆ ಹಂಚಿಕೊಂಡಿದ್ದೇನೆ’ ಎಂದು ಸಚಿವ ಮಹದೇವಪ್ಪ ತಿಳಿಸಿದರು.

‘ಬೆಂಕಿ’ ಮಹದೇವು ಅವರ ಪುತ್ರ ವಿದ್ಯಾಲಂಕಾರ್, ಕೆಪಿಸಿಸಿ ಸದಸ್ಯ ಕೆ.ಅಕ್ಬರ್ ಅಲೀಂ, ಎಂ.ಮಹದೇವು ಅಭಿಮಾನಿಗಳ ಸಂಘದ ಅಧ್ಯಕ್ಷ ಸಿದ್ದಯ್ಯನಹುಂಡಿ ಪುಟ್ಟಸ್ವಾಮಿ, ವೀರಶೈವ ನಗರ ಘಟಕದ ಅಧ್ಯಕ್ಷ ನಂಜಮ್ಮಣ್ಣಿ ಗುರುಮಲ್ಲಪ್ಪ, ವಕೀಲ ಮುರುಳಿ, ಶ್ರೀಧರ್, ಗಾಯತ್ರಿ, ನಗರಸಭಾ ಸದಸ್ಯ ನಟೇಶ್ ಸೇರಿದಂತೆ ಇತರರು ಹಾಜರಿದ್ದರು.

ಅಶ್ವಮೇಧದ ಕುದುರೆ ಕಟ್ಟಿ ಹಾಕುತ್ತೇವೆ: ಕುಮಾರಸ್ವಾಮಿ
ಕೆ.ಆರ್.ನಗರ:
‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯ ಅಶ್ವಮೇಧದ ಕುದುರೆ ಕಟ್ಟಿಹಾಕಲಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ತಿಪ್ಪೂರು ಗ್ರಾಮ ದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೇಳಿದಂತೆ 6 ತಿಂಗಳಲ್ಲಿ ರಾಜ್ಯ ಸರ್ಕಾರ ಪತನ ವಾಗಬೇಕಾದರೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವು ದರಲ್ಲಿ ಅರ್ಥವಿಲ್ಲ ಎಂದರು.

ಉಪಚುನಾವಣೆಗಳು ನನಗೇನು ಹೊಸದಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಉಪಚುನಾವಣೆಗೆ ಅಭ್ಯರ್ಥಿ ಹಾಕಬೇಕಾ ಎಂಬುದು ಪಕ್ಷದಲ್ಲಿ ಚರ್ಚೆ ಮಾಡಲಾಯಿತು. ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಬೇಕಾದಂಥ ಪರಿಸ್ಥಿಯಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ಅಗತ್ಯ ಇಲ್ಲ ಎಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೈಬಿಡ ಲಾಯಿತು ಎಂದು ಹೇಳಿದರು.

ಮತ್ತೆ ಸಾಲ ಮಾಡಿ ಅನಗತ್ಯ ವಾಗಿ ಹಣ ವ್ಯರ್ಥ ಮಾಡುವುದರ ಬದಲು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಕೊಟ್ಟರೆ ಗೌರವಯುತವಾಗಿ ಬದುಕು ಸಾಗಿಸುತ್ತಾರೆ ಎಂದು ಹೇಳಿದರು.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಯಾರ ಪರವೂ ಮತ ಕೇಳುವುದಿಲ್ಲ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದವರೂ ಕಳ್ಳರು, ದರೋಡೆಕೋರರೇ ಆಗಿದ್ದಾರೆ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.