ADVERTISEMENT

ಕುಸಿದ ಕ್ಯಾರೆಟ್‌; ಏರಿದ ಬೀನ್ಸ್

ಧನುರ್ಮಾಸ; ತರಕಾರಿ ಬೇಡಿಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 10:11 IST
Last Updated 10 ಜನವರಿ 2017, 10:11 IST
ಮೈಸೂರು: ಈ ವಾರ ಕ್ಯಾರೆಟ್ ಧಾರಣೆ ಕುಸಿತ ಕಂಡಿದ್ದು, ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿದೆ.
 
ಈ ವರ್ಷದ ಆರಂಭದಲ್ಲಿ ಇದರ ಧಾರಣೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 11 ರೂಪಾಯಿ ಇತ್ತು. ಆದರೆ, ಇದೀಗ ಇದರ ಧಾರಣೆ ಏಳೂವರೆ ರೂಪಾಯಿಗೆ ಇಳಿದಿದೆ. 
 
ಜಿಲ್ಲೆಯಲ್ಲಿ ಹೆಚ್ಚಾಗಿ ಕ್ಯಾರೆಟ್ ಬೆಳೆಯುತ್ತಿಲ್ಲ. ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದಲೇ ಇಲ್ಲಿನ ಮಾರುಕಟ್ಟೆಗೆ ಕ್ಯಾರೆಟ್ ಆವಕವಾಗುತ್ತಿದೆ. ಇದೀಗ ಒಳ್ಳೆಯ ಬೆಳೆ ಬಂದಿರುವುದು ಹಾಗೂ ಧನುರ್ಮಾಸದ ಪ್ರಯುಕ್ತ ಬೇಡಿಕೆ ಕಡಿಮೆಯಾಗಿರುವುದು ದರ ಕುಸಿತಕ್ಕೆ ಕಾರಣವಾಗಿದೆ.
 
ಬೀನ್ಸ್ ದರವೂ ಕೆ.ಜಿಗೆ ₹ 29.50 ಇದ್ದುದು 19 ರೂಪಾಯಿಗೆ ಕಡಿಮೆಯಾಗಿ ಇದೀಗ ₹ 27.60ಗೆ ಏರಿಕೆ ಕಂಡಿದೆ.
 
ಈರುಳ್ಳಿ ಸಗಟು ಧಾರಣೆ ಕೆ.ಜಿಗೆ 10 ರೂಪಾಯಿ ಇದ್ದುದು 7 ರೂಪಾಯಿಗೆ ಇಳಿಕೆಯಾಗಿದೆ. ಈರುಳ್ಳಿ ಬೆಳೆಗಾರರಿಗೆ ಮತ್ತಷ್ಟು ದರ ಕುಸಿತದ ಭೀತಿ ಆವರಿಸಿದೆ.
ನುಗ್ಗೆಯ ಧಾರಣೆ ತನ್ನ ಹಿಂದಿನ ವಾರಗಳ ಧಾರಣೆಯಂತೆ ಏರುಮುಖವಾಗಿದೆ. ಒಂದು ಹಂತದಲ್ಲಿ ಇದರ ಸಗಟು ಧಾರಣೆ ಕೆ.ಜಿಗೆ 100 ರೂಪಾಯಿ ತಲುಪಿತ್ತು. ಇದೀಗ 65 ರೂಪಾಯಿಗೆ ಮಾರಾಟವಾಗುತ್ತಿದೆ.
 
ಭತ್ತದ ಧಾರಣೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಿದೆ. ಕ್ವಿಂಟಲ್‌ಗೆ 2,260 ಇದ್ದ ದರ 2,356ಕ್ಕೆ ಹೆಚ್ಚಿತ್ತು. ಇದೀಗ 1,869ಕ್ಕೆ ಕಡಿಮೆಯಾಗಿದೆ. ಮಾರುಕಟ್ಟೆಗೆ ಇದರ ಆವಕದ ಪ್ರಮಾಣವು 136 ಕ್ವಿಂಟಲ್‌ನಿಂದ 87 ಕ್ವಿಂಟಲ್‌ಗೆ ಕಡಿಮೆಯಾಗಿದೆ. ಜಿಲ್ಲೆಯ ಬಹುತೇಕ ಕಡೆ ಭತ್ತದ ಕೊಯ್ಲು ಮುಗಿಯುವ ಹಂತಕ್ಕೆ ಬಂದಿದೆ. ಹೆಚ್ಚಾಗಿ ಮಧ್ಯವರ್ತಿಗಳ ಬಳಿ ಇರುವ ಭತ್ತ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದೆ.
 
ಇನ್ನುಳಿದಂತೆ ಹಸಿರುಮೆಣಸಿನಕಾಯಿಯ ದರ ಕೆ.ಜಿಗೆ 19 ರೂಪಾಯಿಯಿಂದ 24 ರೂಪಾಯಿಗೆ ಏರಿದೆ. ‘ಮೂರು ವಾರಗಳ ಹಿಂದೆ 6 ರೂಪಾಯಿಗೆ ದರ ಕುಸಿದಿದ್ದನ್ನು ಕಂಡ ಬೆಳೆಗಾರರು ಹಸಿರು ಮೆಣಸಿನಕಾಯಿಯನ್ನು ಕೊಯ್ಲು ಮಾಡದೆ ಹಣ್ಣು ಮಾಡತೊಡಗಿದರು. ಒಣಮೆಣಸಿನಕಾಯಿ ಧಾರಣೆ ಹೆಚ್ಚಿರಬಹುದು ಎಂಬ ನಿರೀಕ್ಷೆ ಅವರದಾಗಿತ್ತು. ಇದರಿಂದಾಗಿ ಹಸಿರು ಮೆಣಸಿನಕಾಯಿ ಆವಕ ಕಡಿಮೆಯಾಗಿ ದರ ಹೆಚ್ಚಿದೆ’ ಎಂದು ನಂಜನಗೂಡಿನ ರೈತ ಶಿವಮಲ್ಲಪ್ಪ ತಿಳಿಸುತ್ತಾರೆ.
 
ಕೋಳಿ ಮಾಂಸ ಹಾಗು ಮೊಟ್ಟೆಯ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ನ ಬ್ರಾಯ್ಲರ್ ಪ್ರೇರೆಂಟ್ಸ್ ಕಲ್ಸ್ ಸಗಟು ದರವು ಕೆ.ಜಿಗೆ 80 ಹಾಗೂ ಕಮರ್ಷಿಯಲ್ ಬ್ರಾಯ್ಲರ್ ದರವು ಕೆ.ಜಿಗೆ 63 ಇದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ಕೋಳಿ ಮೊಟ್ಟೆ ಧಾರಣೆ ಒಂದಕ್ಕೆ 3.73 ಇದ್ದುದು 3.63ಕ್ಕೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.