ADVERTISEMENT

ಚಳವಳಿಗಾರರೊಂದಿಗೆ ವಾಗ್ವಾದ

ಗಿರಿಜನ, ವಿದ್ಯಾರ್ಥಿ, ದಲಿತರು, ಬ್ಯಾಂಕ್‌ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 9:01 IST
Last Updated 28 ಮಾರ್ಚ್ 2015, 9:01 IST

ಮೈಸೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಶುಕ್ರವಾರ ಸರಣಿ ಪ್ರತಿಭಟನೆ ನಡೆದವು. ವಿದ್ಯಾರ್ಥಿಗಳು, ಆದಿವಾಸಿಗಳು, ದಲಿತರು ಹಾಗೂ ಬ್ಯಾಂಕ್‌ ನೌಕರರು ಪ್ರತ್ಯೇಕ ಹೋರಾಟ ನಡೆಸಿದರು.

ನಗರದ ಪುರಭವನದ ಬಳಿಯಿಂದ ಮೆರವಣಿಗೆ ಹೊರಟ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಭಾರತ ಜಾತ್ಯತೀತ ದೇಶ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿವೆ. ಅಲ್ಪಸಂಖ್ಯಾತರು ಹೆಚ್ಚಾಗುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾ­ಗುತ್ತಿದೆ. ಅಲ್ಲದೇ, ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂಬಂತೆ ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಕಾರ್ಯಕರ್ತರು ಬ್ಯಾರಿಕೇಡ್‌ ತಳ್ಳಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಸಮೀಪದಲ್ಲೇ ಇದ್ದ ಪೊಲೀಸರು ಇದನ್ನು ತಡೆಯಲು ಮುಂದಾದರು. ಈ ವೇಳೆ ಬ್ಯಾರಿಕೇಡ್‌ಗೆ ಸಿಲುಕಿ ಅಂಬೇಡ್ಕರ್‌ ಭಾವಚಿತ್ರವಿದ್ದ ಬ್ಯಾನರ್‌ ಹರಿಯಿತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಹರಿಹಾಯ್ದರು. ಈ ವೇಳೆ ಪರಿಸ್ಪರ ವಾಗ್ವಾದ ನಡೆಯಿತು. ಜಿಲ್ಲಾ ಸಂಚಾಲಕ ಮಲ್ಲೇಶ್‌ ಚುಂಚನಹಳ್ಳಿ, ಶ್ರೀನಿವಾಸ ಇದ್ದರು.

ಮಸೂದೆಗೆ ವಿರೋಧ: ಗ್ರಾಮೀಣ ಬ್ಯಾಂಕ್‌ಗಳ ತಿದ್ದುಪಡಿ ಮಸೂದೆ ಖಂಡಿಸಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಮತ್ತು ನೌಕರರ ಸಂಘ ಶುಕ್ರವಾರ ಧರಣಿ ನಡೆಸಿತು. ಗ್ರಾಮೀಣ ಪ್ರದೇಶದ ಜನತೆಯನ್ನು ಲೇವಾದೇವಿದಾರರಿಂದ ಮುಕ್ತಗೊಳಿಸಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಬ್ಯಾಂಕ್‌ ಸೇವೆ ಆರಂಭಿಸಲಾಗಿದೆ.

ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಗತ್ಯವಾದ ಸೌಲಭ್ಯಗಳನ್ನು ಗ್ರಾಮೀಣರಿಗೆ ನೀಡುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಶೇ 50, ರಾಜ್ಯ ಸರ್ಕಾರ ಶೇ 15 ಹಾಗೂ ಪ್ರೇರಿತ ಬ್ಯಾಂಕಿನ ಬಂಡವಾಳ ಶೇ 35ರಷ್ಟಿದೆ. ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರದ ಬಂಡವಾಳ­ವನ್ನು ಶೇ 49ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದರು. ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಈರಪ್ಪಗೌಡ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್‌. ದಾಸೇಗೌಡ ಹಾಜರಿದ್ದರು.

ವಿದ್ಯಾರ್ಥಿಗಳ ಆಕ್ರೋಶ: ‘ಸಮ–ಬೆಸ’ ಪರೀಕ್ಷಾ ಪದ್ಧತಿಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ವಿವಿ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸದಸ್ಯರು ಕ್ರಾಫರ್ಡ್‌ ಭವನದ ಎದುರು ಪ್ರತಿಭಟನೆ ನಡೆಸಿದರು. ಬಾಕಿ ಉಳಿಸಿಕೊಂಡ ವಿಷಯಗಳ ಪರೀಕ್ಷೆ ಎದುರಿಸಲು ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತೊಂದು ವರ್ಷ ಕಾಯಬೇಕಾಗುತ್ತದೆ. ಅಲ್ಲದೇ, ಮರು­ಮೌಲ್ಯಮಾಪನದ ಶುಲ್ಕವನ್ನು ₨ 800ಕ್ಕೆ ಏರಿಸಿದ್ದು ಖಂಡನೀಯ ಎಂದರು.

ಗಿರಿಜನರ ಪ್ರತಿಭಟನೆ: ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅರಣ್ಯದಲ್ಲಿ ವಾಸವಾಗಿದ್ದರೂ ಕಾಡಿನ ಮೇಲೆ ಹಕ್ಕು ಇಲ್ಲ. ಭೂಮಾಲೀಕರು ಅರಣ್ಯದ ಮೇಲೆ ಹಕ್ಕು ಸಾಧಿಸಿದ್ದಾರೆ. ಮೂಲ ನಿವಾಸಿಗಳಿಗೆ ಭೂಮಿ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಳ ಕಾಲ್ಕರ್‌, ಶೈಲೇಂದ್ರ ಕುಮಾರ್‌, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.