ADVERTISEMENT

ಚಿನಕುರಳಿ ಪ್ರಶ್ನೆ; ಫಟಾಫಟ್‌ ಉತ್ತರ

‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ ವಿಭಾಗಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:57 IST
Last Updated 5 ಜನವರಿ 2017, 9:57 IST

ಮೈಸೂರು: ಸಾಮಾನ್ಯ ಜ್ಞಾನವನ್ನು ಓರೆಗಲ್ಲಿಗೆ ಹಚ್ಚುವ ಚಿನಕುರಳಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಫಟಾಫಟ್‌ ಉತ್ತರ ನೀಡಿ ಜಾಣ್ಮೆ ಪ್ರದರ್ಶಿಸಿ ಮೆಚ್ಚುಗೆ ಗಿಟ್ಟಿಸಿದರು.ನಗರದ ಜೆ.ಕೆ.ಮೈದಾನದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಅಮೃತಮಹೋತ್ಸವ ಭವನದಲ್ಲಿ ಬುಧವಾರ ನಡೆದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. 

ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಅವರು ‘ದುರ್ಗಾ ದೇವಿಯು ಸಂಹಾರ ಮಾಡಿದ ರಾಕ್ಷಸನ ಹೆಸರು ಇರುವ ಊರು ಯಾವುದು?’ ಎಂದು ಪ್ರಶ್ನಾವಳಿ ಶುರು ಮಾಡಿದರು.ಅದಕ್ಕೆ ‘ಮೈಸೂರು’ (ಮಹಿಷಪುರ) ಎಂಬ ಉತ್ತರ ಪ್ರೇಕ್ಷಕರ ಗ್ಯಾಲರಿಯಿಂದ ತೇಲಿ ಬಂತು. ‘ಸೈಫ್‌ ಅಲಿಖಾನ್‌ ಮತ್ತು ಕರೀನಾ ಕಪೂರ್‌ ದಂಪತಿಯ ಪುತ್ರನ ಹೆಸರೇನು?’ ಪ್ರಶ್ನೆಗೆ, ‘ತೈಮೂರ್‌ ಅಲಿಖಾನ್‌ ಪಟೌಡಿ’ ಎಂದು ಉತ್ತರಿಸಿದರು.

ಪ್ರಾಥಮಿಕ ಸುತ್ತಿನಲ್ಲಿ 20 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸುವ ಸ್ಪರ್ಧೆ ನಡೆಯಿತು. ಎಲ್‌ಇಡಿ ಪರದೆಯಲ್ಲಿ ಮೂಡಿದ ಪ್ರಶ್ನೆಗಳಿಗೆ 1 ರಿಂದ 3 ಪದಗಳಲ್ಲಿ ಹಾಳೆಯಲ್ಲಿ ಉತ್ತರಿಸಬೇಕಿತ್ತು. ಈ ಸುತ್ತಿನಲ್ಲಿ 500 ತಂಡಗಳು (ಒಂದು ತಂಡದಲ್ಲಿ ತಲಾ ಇಬ್ಬರು) ಭಾಗವಹಿಸಿದ್ದವು.

ಎಕ್ಸೆಲ್‌ ಪಬ್ಲಿಕ್‌ ಶಾಲೆಯ ಆದಿತ್ಯ ಹೆಗಡೆ ಮತ್ತು ಪ್ರಧಾನ್‌ ಎ.ಕುಮಾರ್‌, ಹರಿ ವಿದ್ಯಾಲಯದ ಯುವಶಂಕರ್‌ ಮತ್ತು ನೇಸರ, ಭಾರತೀಯ ವಿದ್ಯಾ ಭವನದ ಬಿ.ಎ.ಶ್ರೇಯಸ್‌ ಮತ್ತು ಎಸ್‌.ಹರ್ಷಿತ್‌, ಎಜೆಸಿಇ ಕ್ಯಾಂಪಸ್‌ನ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯ ಶಮಂತ್‌ ಮತ್ತು ರುದ್ರೇಶ್‌, ಸದ್ವಿದ್ಯಾ ಶಾಲೆಯ ಎಸ್‌.ಶ್ರೇಯಸ್‌ ಮತ್ತು ಬಿ.ಎನ್‌.ನಿಖಿಲ್‌, ಜಯಂತ್‌ ಅಯ್ಯಂಗಾರ್‌ ಮತ್ತು ಶ್ರೀದತ್ತ ಎಸ್‌.ನಾಸಿರ್‌ ತಂಡಗಳು ವಿಭಾಗೀಯಮಟ್ಟದ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.

ಈ ಸುತ್ತಿನಲ್ಲಿ ಮೊದಲಿಗೆ ಮಿಕ್ಸಡ್‌ ರೌಂಡ್‌ ನಡೆಯಿತು. ಅದರಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದವು. ಎರಡನೇ ಹಂತದಲ್ಲಿ ಸ್ಪರ್ಧಿಗಳಿಗೆ ವಿಷಯ ಆಯ್ಕೆ ಅವಕಾಶ ಕಲ್ಪಿಸಿ (ಕಲೆ, ವ್ಯಕ್ತಿ, ವಾಣಿಜ್ಯ, ಸಾಹಿತ್ಯ, ಸಿನಿಮಾ, ವನ್ಯಜೀವಿ) ಸ್ಥಳೀಯ ಪ್ರಶ್ನೆಗಳನ್ನು ಕೇಳಿದರು. ಮೂರನೇ ಹಂತದಲ್ಲಿ ಸಂಪರ್ಕ ಸೇತು ಪ್ರಶ್ನೆಗಳಿದ್ದವು.

ನಾಲ್ಕನೇ ಹಂತದಲ್ಲಿ ಸುಳಿವು ಆಧಾರಿತ ಪ್ರಶ್ನೆಗಳು ಇದ್ದವು. ಕೊನೆಯಲ್ಲಿ ಬಜ್ಜರ್‌ ಒತ್ತಿ (ಮೊದಲು ಒತ್ತಿದವರು ಮೊದಲು ಉತ್ತರಿಸುವುದು) ಉತ್ತರ ನೀಡುವ ಸ್ಪರ್ಧೆ ನಡೆಯಿತು.

ಸುತ್ತುಗಳು ಮುಗಿದಾಗ ಎಕ್ಸೆಲ್‌ ಪಬ್ಲಿಕ್‌ ಶಾಲೆ ಹಾಗೂ ಭಾರತೀಯ ವಿದ್ಯಾಭವನ ತಂಡಗಳು ತಲಾ 50 ಅಂಕ ಗಳಿಸಿದ ಕಾರಣ ಸ್ಪರ್ಧೆ ಸಮಬಲವಾಯಿತು. ಆಗ ಟೈ ಬ್ರೇಕರ್‌ ಪ್ರಶ್ನೆಗೆ ಮೊರೆ ಹೋಗಲಾಯಿತು.

ಟೈ ಬ್ರೇಕರ್‌ ಪ್ರಶ್ನೆ: ಮೈಸೂರು ವಿಮಾನ ನಿಲ್ದಾಣದಿಂದ ಈಚೆಗೆ ವಿಮಾನಗಳು ಹೆಚ್ಚು ಸಂಚರಿಸಲು ಕಾರಣವಾದ ವಿದ್ಯಮಾನ ಯಾವುದು?
‘ದೇಶದ ವಿವಿಧೆಡೆಗೆ ಹೊಸ ನೋಟುಗಳನ್ನು ಒಯ್ಯಲು ಇಲ್ಲಿಂದ ವಿಮಾನಗಳು ಹೆಚ್ಚು ಸಂಚರಿಸಿದವು’ ಎಂದು ಎಕ್ಸೆಲ್‌ ಪಬ್ಲಿಕ್‌ ಶಾಲೆ ತಂಡದವರು ಬಜ್ಜರ್‌ ಒತ್ತಿ ಮೊದಲು ಉತ್ತರ ನೀಡಿ ಗೆಲುವಿನ ನಗೆ ಬೀರಿದರು.

ಕಾರ್ಯಕ್ರಮ ಆರಂಭದಿಂದ ಅಂತ್ಯ ದವರೆಗೂ ಸಭಾಂಗಣದಲ್ಲಿ ಉತ್ಸಾಹ, ಉಲ್ಲಾಸ ಮೇಳೈಸಿತ್ತು. ಪ್ರೇಕ್ಷಕರ ಗ್ಯಾಲರಿಗೆ ವರ್ಗಾವಣೆಯಾದ ಪ್ರಶ್ನೆಗಳಿಗೆ ನಾ ಮುಂದು, ತಾ ಮುಂದು ಎಂದು ಕೈ ಎತ್ತಿ ಉತ್ತರ ನೀಡಿ ಬಹುಮಾನ ಗಿಟ್ಟಿಸಿದರು. ಹಂತದಿಂದ ಹಂತಕ್ಕೆ ಕುತೂಹಲ, ಕಾತರ ಇಮ್ಮಡಿಯಾಯಿತು.

ರಾಘವ್‌ ಚಕ್ರವರ್ತಿ ಅವರು ಪ್ರಶ್ನೆಗೆ ಪೂರಕವಾಗಿ ಹಿನ್ನೆಲೆ, ಮುನ್ನೆಲೆ, ಸುಳಿವು ನೀಡುತ್ತಾ ಸಭಾಂಗಣದ ತುಂಬ ಓಡಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ವಿದ್ಯಾರ್ಥಿಗಳು ಖುಷಿಯಿಂದ ಪ್ರತಿ ಪ್ರಶ್ನೆಗೂ ಉತ್ತರಿಸಿದರು. ಕೆಲ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರ ನೀಡಿದರು. ಪ್ರಚಲಿತ ವಿದ್ಯಮಾನ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ರಾಜಕೀಯ, ಕ್ರೀಡೆ, ವಿಜ್ಞಾನ– ತಂತ್ರಜ್ಞಾನ, ಸಿನಿಮಾ, ವ್ಯಕ್ತಿ ವಿಚಾರ, ಪ್ರಶಸ್ತಿ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 48 ಪ್ರಶ್ನೆ ಕೇಳಲಾಯಿತು.

ಮಹಾಲಕ್ಷ್ಮಿ ಸ್ವೀಟ್ಸ್‌ ಹಾಗೂ ಎನ್‌. ರಂಗರಾವ್‌ ಅಂಡ್‌ ಸನ್ಸ್‌ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾಲಕ್ಷ್ಮಿ ಸ್ವೀಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ದಿ ಪ್ರಿಂಟರ್‌್ಸ ಮೈಸೂರು ಪ್ರೈವೇಟ್‌ ಲಿಮಿಟೆಡ್‌ (ಟಿಪಿಎಂಎಲ್‌) ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಬ್ರ್ಯಾಂಡ್‌ ಸ್ಟ್ರಾಟಜಿ ಡೆವಲಪ್‌ಮೆಂಟ್‌ ಮುಖ್ಯಸ್ಥ ಹರ್ಷ್‌ ಮಿತ್ತಲ್‌, ಹಿರಿಯ ವ್ಯವಸ್ಥಾಪಕ ಜಗನ್ನಾಥ ಜೋಯಿಸ್‌ ಇದ್ದರು.

ಬಹುಮಾನ ವಿತರಣೆ
ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ಪ್ರದಾನ ಮಾಡಲಾಯಿತು. ಇತರ ಮೂರು ತಂಡಗಳಿಗೂ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಕ್ವಿಜ್‌ನಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.  ಎನ್‌.ರಂಗರಾವ್‌ ಅಂಡ್‌ ಸನ್ಸ್‌ ಸಮೂಹ ಸಂಸ್ಥೆಯ ಅಧ್ಯಕ್ಷ ಆರ್‌.ಗುರು ಅವರು ಟ್ರೋಫಿ ಪ್ರದಾನ ಮಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್‌.ಆರ್‌.ಬಸಪ್ಪ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.