ADVERTISEMENT

ನಿರ್ಭಯ ಬದುಕಿಗೆ ಒದ್ದಾಡುತ್ತಿರುವ ಮಹಿಳೆ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:01 IST
Last Updated 18 ಫೆಬ್ರುವರಿ 2017, 9:01 IST
ಮೈಸೂರು: ಮಹಿಳಾ ದೌರ್ಜನ್ಯ ತಡೆಯಲು ಈಗಾಗಲೇ ಕಾನೂನು ರೂಪಿಸಲಾಗಿದೆ. ಅವುಗಳ ಕಟ್ಟುನಿಟ್ಟಿನ ಜಾರಿಗೆ ಇರುವ ಅಡೆತಡೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್‌ ಇಲ್ಲಿ ಶುಕ್ರವಾರ ಹೇಳಿದರು.
 
ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಏರ್ಪಡಿಸಿದ್ದ ‘ಮಹಿಳೆಗೆ ಸಂಬಂಧಿತ ಮಾನವ ಹಕ್ಕುಗಳು, ಕರ್ತವ್ಯಗಳು ಹಾಗೂ ಶಿಕ್ಷಣ’ ಕುರಿತ ಎರಡು ದಿನಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
 
ಪ್ರತಿ ಮಾನವನಿಗೂ ಹುಟ್ಟಿನಿಂದ ಹಕ್ಕುಗಳು ಬರುತ್ತವೆ. ಆದರೆ 2ನೇ ಮಹಾಯುದ್ಧದ ಸಂದರ್ಭದಲ್ಲಿ ಅಮಾನವೀಯವಾಗಿ ಮಾನವ ಹತ್ಯೆಗಳು ನಡೆದಿದ್ದರಿಂದ 1948 ಡಿ. 10ರಂದು ಮಾನವ ಹಕ್ಕುಗಳನ್ನು ಘೋಷಿಸಲಾಯಿತು. ಇಂಥ ಹಕ್ಕುಗಳು ನಮಗೆ ಸಂವಿಧಾನದ ಮೂಲಕವೇ ಲಭಿಸಿವೆ ಎಂದರು.
 
ಕಾನೂನು ವಿಭಾಗದ ಡೀನ್‌ ಡಾ.ರಮೇಶ್‌ ಮಾತನಾಡಿ, ದೆಹಲಿ ನಿರ್ಭಯಾ, ಮಹಾರಾಷ್ಟ್ರದ ಸುಲೇಖಾ ಹಾಗೂ ಇನ್ನೂ ಹಲವು ಅತ್ಯಾಚಾರ ಪ್ರಕರಣಗಳು ಇಂದಿನ ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ನಿರ್ಭಯವಾಗಿ ಬದುಕಲು ಒದ್ದಾಡು ತ್ತಿರುವ ಒಂಟಿ ತಾಯಂದಿರು, ವಿಧವೆ ಯರು, ಅವಿವಾಹಿತ ಮಹಿಳೆಯರ ಸಮಸ್ಯೆಗಳು ಇನ್ನೂ ತಾಂಡವವಾಡುತ್ತಿವೆ ಎಂದು ವಿಷಾದಿಸಿದರು.
 
ಸಮ್ಮೇಳನ ಉದ್ಘಾಟಿಸಿದ ಮೈಸೂರು ವಿ.ವಿ ಪ್ರಭಾರ ಕುಲಪತಿ ಪ್ರೊ.ಯಶವಂತ್‌ ಡೋಂಗ್ರೆ ಮಾತ ನಾಡಿ, ಕುಟುಂಬದಿಂದಲೇ ತಾರತಮ್ಯ ಧೋರಣೆ ಆರಂಭವಾಗುತ್ತದೆ. ದಿನವೂ ಮನೆಯಲ್ಲಿ ಉಳಿಯುವ ಆಹಾರ ಮಹಿಳಾ ಸದಸ್ಯರಿಗೆ ಮೀಸಲಾಗುತ್ತದೆ. ಸಂಪತ್ತಿನ ಹಂಚಿಕೆ ವಿಷಯದಲ್ಲೂ ಮಹಿಳೆಗೆ ಕೊನೆಯ ಸ್ಥಾನ. ಇಂಥ ಧೋರಣೆಗಳು ಬದಲಾಗುವವರೆಗೆ ಮಹಿಳೆಗೆ ಸಂಪೂರ್ಣ ಹಕ್ಕುಗಳು ಲಭಿಸಿವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
 
ಕುಲಸಚಿವ ಪ್ರೊ.ರಾಜಣ್ಣ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ಇಲ್ಲದಿದ್ದ ಕಾಲದಲ್ಲೂ ಝಾನ್ಸಿರಾಣಿ ಲಕ್ಷ್ಮಿಬಾಯಿ, ಒನಕೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಕೆಲವು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಂಡು ಹೋರಾಟದಲ್ಲಿ ಪಾಲ್ಗೊಂಡಿದನ್ನು ಕಾಣುತ್ತೇವೆ. ಮೈಸೂರಿನಲ್ಲಿ ಯುವರಾಜ ಚಿಕ್ಕ ವಯಸ್ಸಿನವರಾಗಿದ್ದ ಕಾರಣ ರಾಣಿ ಲಕ್ಷ್ಮಮ್ಮಣ್ಣಿ ಅವರು ರಾಜಮಾತೆಯಾಗಿ ರಾಜ್ಯಭಾರ ನಡೆಸಿದ್ದನ್ನು ಸ್ಮರಿಸಬಹುದು ಎಂದು ಹೇಳಿದರು.
 
* ಮಹಿಳಾ ದೌರ್ಜನ್ಯ ತಡೆ ಕಾನೂನುಗಳ ಸುಧಾರಣೆಗೆ ತಿದ್ದುಪಡಿಯ ಅಗತ್ಯವಿದೆಯೇ ಎಂಬ ಬಗ್ಗೆ ಚಿಂತನೆ ನಡೆಯಬೇಕಿದೆ
-ಪಿ.ಜಿ.ಎಂ.ಪಾಟೀಲ್‌, ಪ್ರಧಾನ ಜಿಲ್ಲಾ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.