ADVERTISEMENT

ಬೆಂಗಳೂರಿನ ಗೋಪಾಲಕರಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:37 IST
Last Updated 6 ಫೆಬ್ರುವರಿ 2017, 5:37 IST

ಮೈಸೂರು: ಮೈಸೂರು ಗೋಪಾಲಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಇಬ್ಬರು ಗೋಪಾಲಕರು ಅತಿ ಹೆಚ್ಚು ಹಾಲು ಕರೆಯುವ ಮೂಲಕ ವಿಜಯ ಮಾಲೆಯನ್ನು ತಮ್ಮದಾಗಿಸಿಕೊಂಡರು.

ಇಲ್ಲಿನ ಜೆ.ಕೆ.ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಂಗಳೂರಿನ ಪಾದರಾಯನಪುರದ ಚೌಡೇಶ್ವರಿ ಡೇರಿ ಫಾರಂನ ಸಿ.ಸತೀಶಕುಮಾರ್ ಚೌಡಯ್ಯ ಅವರು ದಿನಕ್ಕೆ 42.2 ಕೆ.ಜಿ ಹಾಲು ಕರೆಯುವ ಮೂಲಕ ಬಹುಮಾನ ಪಡೆದರು. ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಎಂ.ಜಿ.ಸೋಮಣ್ಣ 40.6 ಕೆ.ಜಿ ಹಾಲು ಕರೆದು ದ್ವಿತೀಯ ಬಹುಮಾನ ಗಳಿಸಿದರು.

ಮಂಡ್ಯದ ಹೊಸಹಳ್ಳಿಯ ಡಿ.ಧ್ರುವಕುಮಾರ್‌ ಹೊನ್ನೇಗೌಡ 39.9 ಕೆ.ಜಿ ಹಾಲು ಕರೆದು ತೃತೀಯ ಸ್ಥಾನ ಪಡೆದರು. ಬೆಂಗಳೂರಿನ ಬೇಗೂರಿನ ಲಕ್ಷ್ಮಣ ಹೊಗೆಬಂಡಿ 39.7 ಕೆ.ಜಿ ಹಾಲು ಕರೆದು 5ನೇ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಅಧಿಕ ಹಾಲು ಕರೆಯುವ ಮೊದಲ ಐದು ಹಸುಗಳಿಗೆ ಕ್ರಮವಾಗಿ ₹ 1 ಲಕ್ಷ ರೂಪಾಯಿ ನಗದು, ಪಾರಿತೋಷಕ ಹಾಗೂ 2 ಕೆ.ಜಿ ಬೆಳ್ಳಿದೀಪ, ₹ 75 ಸಾವಿರ, ಪಾರಿತೋಷಕ ಮತ್ತು ಒಂದೂವರೆ ಕೆ.ಜಿ. ಬೆಳ್ಳಿದೀಪ, ₹ 50 ಸಾವಿರ, ₹ 30 ಸಾವಿರ, ₹ 20 ಸಾವಿರ ಹಾಗೂ ಪಾರಿತೋಷಕ ನೀಡಲಾಯಿತು.

ಚಲನಚಿತ್ರ ನಟ ದರ್ಶನ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಚಲನಚಿತ್ರ ನಟ ಸೃಜನ್ ಲೋಕೇಶ್, ಗೋಪಾಲಕರ ಸಂಘದ ಅಧ್ಯಕ್ಷ ಧ್ರುವಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಸುನೀಲ್‌ ಬೋಸ್, ಜಿ.ಪಂ ಸದಸ್ಯ ರಾಕೇಶ್‌ ಪಾಪಣ್ಣ, ಗೋಪಾಲಕರ ಸಂಘದ ಅಬ್ದುಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.