ADVERTISEMENT

‘ಮಿಂಚಿನ ನೋಂದಣಿ’ಗೆ ಉತ್ತಮ ಸ್ಪಂದನೆ

ವಿಧಾನಸಭೆ ಚುನಾವಣೆ: ಜಿಲ್ಲೆಯ 2,687 ಮತಗಟ್ಟೆಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 11:24 IST
Last Updated 9 ಏಪ್ರಿಲ್ 2018, 11:24 IST
ಮೈಸೂರಿನ ಮತಗಟ್ಟೆಗಳಲ್ಲಿ ನಾಗರಿಕರು ತಮ್ಮ ಹೆಸರು ಸೇರಿಸಿದರು
ಮೈಸೂರಿನ ಮತಗಟ್ಟೆಗಳಲ್ಲಿ ನಾಗರಿಕರು ತಮ್ಮ ಹೆಸರು ಸೇರಿಸಿದರು   

ಮೈಸೂರು: ಮತದಾರರ ವಿಶೇಷ ನೋಂದಣಿ ಕಾರ್ಯಕ್ರಮ ‘ಮಿಂಚಿನ ನೋಂದಣಿ’ಗೆ ಭಾನುವಾರ ಜಿಲ್ಲೆಯಲ್ಲಿ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯ ಎಲ್ಲ 2,687 ಮತಗಟ್ಟೆಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿ ಮತದಾನಕ್ಕೆ ಸಜ್ಜಾದರು.

ನಗರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಈ ಅಭಿಯಾನದಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ನಾಗರಿಕರು ಹೆಸರು ನೋಂದಾಯಿಸಿದರು. ಹೊಸ ಮತದಾರರು ತಮ್ಮ ದಾಖಲಾತಿಗಳೊಂದಿಗೆ ನಮೂನೆ 6ರಲ್ಲಿ ಭರ್ತಿ ಮಾಡಿ ಸಲ್ಲಿಸಿದರು. ಬೇರೆ ಕ್ಷೇತ್ರಗಳಿಂದ ಹೆಸರು ವರ್ಗಾವಣೆಗೊಳಿಸುವವರೂ ಇದೇ ನಮೂನೆಯ ಮೂಲಕ ಅರ್ಜಿ ಸಲ್ಲಿಸಬೇಕಿತ್ತು. ತಮ್ಮ ಹಿಂದಿನ ಕ್ಷೇತ್ರದಲ್ಲಿ ಹೆಸರು ರದ್ದುಪಡಿಸಿದ ಅರ್ಜಿ ಸಮೇತ (ನಮೂನೆ 7) ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿದರು.

ಸಾಕಷ್ಟು ಗೊಂದಲ: ಮತದಾರರ ಪಟ್ಟಿಯಲ್ಲಿರುವ ಹೆಸರು ತಿದ್ದುಪಡಿಗೂ ಅವಕಾಶ ಇದ್ದ ಕಾರಣ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಅಗತ್ಯವಾಗಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಇರಲಿಲ್ಲ. ಅಲ್ಲದೇ, ಮತಗಟ್ಟೆಗಳನ್ನು ಹುಡುಕುವುದೇ ಗೊಂದಲವಾಯಿತು. ಯಾವ ಮತಗಟ್ಟೆಗೆ ತೆರಳಿದರೂ ಅಧಿಕಾರಿಗಳಿಂದ ‘ಇನ್ನೊಂದು ಮತಗಟ್ಟೆಯಲ್ಲಿ ಹುಡುಕಿ’ ಎಂಬ ಉತ್ತರವೇ ಸಿಗುತ್ತಿತ್ತು.

ADVERTISEMENT

ಅನೇಕ ಮತದಾರರು ಈ ಮಾಹಿತಿಯೇ ಸಿಗದೇ ವಾಪಸಾದರು. ಹಲವು ಶಾಲೆಗಳಲ್ಲಿ ಹಳೆಯ ಮತದಾರರ ಪಟ್ಟಿಯನ್ನೇ ಇರಿಸಿಕೊಂಡಿದ್ದರು. ಅಧಿಕಾರಿಗಳು ‘ಈ ಪಟ್ಟಿಯಲ್ಲಿ ಹುಡುಕಲೇಬೇಡಿ. ಇವು ಹಳೆಯ ಪಟ್ಟಿಗಳು‘ ಎಂದು ಜನರಿಗೆ ಹೇಳಿ ಕಳುಹಿಸುತ್ತಿದ್ದರು!

ಕೆಲವೆಡೆ ಮಧ್ಯಾಹ್ನ 12ರ ನಂತರವೂ ಶಾಲೆಗಳಲ್ಲಿ ಅಧಿಕಾರಿಗಳು ಬಾರದೇ ಇದ್ದ ಕಾರಣಕ್ಕೆ ನಾಗರಿಕರು ಪರದಾಡಬೇಕಾಯಿತು. ಹಲವರು
ಖಾಲಿ ಶಾಲೆಯನ್ನು ಕಂಡು ವಾಪಸಾದರು.

ರಾಜಕಾರಣಿಗಳಿಂದಲೂ ಅಭಿಯಾನ: ಹಲವು ರಾಜಕಾರಣಿಗಳು ಮನೆಗಳಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವಂತೆ ಮನವಿ ಮಾಡಿದರು. ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್, ಜೆಡಿಎಸ್‌ನ ಕೆ.ವಿ.ಮಲ್ಲೇಶ್‌ ಇತರರು ಮತ ಹಾಕುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.