ADVERTISEMENT

ಮೂಲನಿವಾಸಿ ಗಿರಿಜನರ ಭೂಮಿ ಉಳಿಯಲಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:06 IST
Last Updated 9 ನವೆಂಬರ್ 2017, 9:06 IST

ಮೈಸೂರು: ಬಂಡವಾಳದಾರರು ಒತ್ತುವರಿ ಮಾಡಿಕೊಳ್ಳುತ್ತಿರುವ ಮೂಲ ನಿವಾಸಿ ಗಿರಿಜನರ ಭೂಮಿ ಉಳಿಸಬೇಕು ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು.
ದಲಿತ ಸಂಘರ್ಷ ಸಮಿತಿ (ದಸಂಸ) ಜಿಲ್ಲಾ ಶಾಖೆಯಿಂದ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅವರ ತೋಟದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಸಂಸ ಪದಾಧಿಕಾರಿಗಳೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

ಬಂಡವಾಳದಾರರು ಗಿರಿಜನರ ಅಸಹಾಯಕತೆ ದುರುಪಯೋಗ ಪಡಿಸಿಕೊಂಡು ಅವರ ಭೂಮಿ ಗುತ್ತಿಗೆ ಪಡೆದು ಅಥವಾ ಒತ್ತುವರಿ ಮಾಡಿಕೊಂಡು ಆದಾಯದ ಮೂಲ ನಾಶ ಮಾಡಿ ವಂಚಿಸುತ್ತಿದ್ದಾರೆ. ಸಹಕಾರ ಸಂಘದ ಮೂಲಕ ಗಿರಿಜನರಲ್ಲಿ ಅರಿವು ಮೂಡಿಸಿ ಭೂಮಿಯಲ್ಲಿ ಬೆಲೆ ಬಾಳುವ ಸಸಿಗಳು ಅಥವಾ ಹಣ್ಣಿನ ಗಿಡ ನೆಡಬೇಕು. ಆ ಮೂಲಕ ಭೂಮಿ ಉಳಿಸಿ ಮುಂದಿನ ಪೀಳಿಗೆಗೂ ಆದಾಯ ದೊರಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬೆಟ್ಟಯ್ಯ ಕೋಟೆ ನೇತೃತ್ವದಲ್ಲಿ ಜಿಲ್ಲಾ ದಸಂಸ ಬಹಳಷ್ಟು ಅನುಭವ ಪಡೆದಿದೆ. ಈಗ ರಸ್ತೆಬದಿ ವ್ಯಾಪಾರಿಗಳನ್ನು ಸಂಘಟಿಸಿ ಸಹಕಾರ ತತ್ವದಡಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿ, ಸ್ವಾವಲಂಭಿಗಳನ್ನಾಗಿಸುವಲ್ಲಿ ಯಶಸ್ವಿ ಪ್ರಯೋಗ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸಹಕಾರ ಕ್ಷೇತ್ರದ ಕಾರ್ಯವ್ಯಾಪ್ತಿ ವಿಸ್ತರಿಸಿ ಜಿಲ್ಲೆಯ ಮೂಲನಿವಾಸಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ADVERTISEMENT

ಚುನಾವಣಾ ಸಂದರ್ಭದಲ್ಲಿ ದಸಂಸ ಬಣಗಳು ತೆಗೆದುಕೊಳ್ಳುವ ರಾಜಕೀಯ ತೀರ್ಮಾನಗಳು ಗೊಂದಲ ಸೃಷ್ಟಿಸುತ್ತಿವೆ. ರಾಜಕಾರಣಿಗಳು ಇದರ ಲಾಭ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಭಿನ್ನ ನಡೆ ತಡೆಯಲು, ಸೈದ್ಧಾಂತಿಕ ಕಾರಣಗಳಿಂದ ಸರ್ವೋದಯ ಕರ್ನಾಟಕ ಪಕ್ಷವನ್ನು ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನಗೊಳಿಸಲಾಗಿದೆ. ಎಲ್ಲ ಪ್ರಗತಿಪರ ಸಂಘಟನೆ ಒಗ್ಗೂಡಿಸಿ ಮಹಾಮೈತ್ರಿ ರಚಿಸಲಾಗಿದೆ. ಸ್ವರಾಜ್ ಇಂಡಿಯಾ ಬೆಂಬಲಿಸಿ ಇದರ ಜತೆ ಸಕ್ರಿಯವಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ರಾಜಕೀಯ ದಿಕ್ಸೂಚಿ ಬದಲಾಗುತ್ತದೆ ಎಂದರು.

ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕರಾಂ, ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಉಮಾ ಮಹದೇವು, ಹೆಗ್ಗನೂರು ನಿಂಗರಾಜು, ಸೋಮಸುಂದರ್, ಎಚ್.ಎಸ್.ಸಿದ್ದರಾಜು, ತಾಲ್ಲೂಕು ಸಂಚಾಲಕರಾದ ಮುತ್ತು ಉಯ್ಯಂಬಳಿ, ರಾಜು ಕುಕ್ಕೂರು, ರಾಮಕೃಷ್ಣ ಅತ್ತಿಕುಪ್ಪೆ, ಮಹಾದೇವಸ್ವಾಮಿ ಶಂಕರಪುರ, ಯಡಕೊಳ ಮಹದೇವಸ್ವಾಮಿ, ಕುಪ್ಪೆಗಾಲ ಸೋಮಣ್ಣ, ಆರ್.ಶಾಂತಾ ಉದ್ದೂರು, ಮಹದೇವಮ್ಮ, ರತ್ನಪ್ರಭಾ, ಎಸ್.ರಾಜಣ್ಣ, ಅಪ್ಸರ್ ಮಹಮ್ಮದ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.