ADVERTISEMENT

ಮೌಲ್ಯಮಾಪನ ಕೊರತೆಯಿಂದ ಯೋಜನೆ ವಿಫಲ

​ಪ್ರಜಾವಾಣಿ ವಾರ್ತೆ
Published 24 ಮೇ 2016, 9:40 IST
Last Updated 24 ಮೇ 2016, 9:40 IST

ಮೈಸೂರು: ಪುರಾವೆ ಇಲ್ಲದ ಅಂಕಿ ಅಂಶ, ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದು ಹಾಗೂ ಮೌಲ್ಯಮಾಪನ ಕೊರತೆಯಿಂದ  ಕಲ್ಯಾಣ ಹಾಗೂ ಬಡತನ ನಿರ್ಮೂಲನೆ ಯೋಜನೆಗಳು ವಿಫಲವಾಗುತ್ತಿವೆ ಎಂದು ರಾಜ್ಯ ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜೀವಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಬ್ಬಾಳದಲ್ಲಿರುವ ವಿ–ಲೀಡ್ ಸಂಸ್ಥೆಯಲ್ಲಿ ಗ್ರಾಸ್‌ರೂಟ್‌ ರಿಸರ್ಚ್‌ ಅಂಡ್‌ ಅಡ್ವೊಕೆಸಿ ಮೂವ್‌ಮೆಂಟ್‌ (ಗ್ರಾಮ್‌) ಆಯೋಜಿಸಿರುವ ‘ಕಾರ್ಯನೀತಿ ವಿಶ್ಲೇಷಣೆ, ಮೌಲ್ಯಮಾಪನ ಕಾರ್ಯಾಗಾರ’ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೀತಿ ನಿರೂಪಣೆಯಲ್ಲಿ ಸಂಶೋಧನೆ ಹಾಗೂ ನಿರ್ಧಾರಗಳು ಸಮರ್ಪಕವಾಗಿದ್ದರೆ ರಾಜ್ಯದಲ್ಲಿ ₹ 40 ಸಾವಿರ ಕೋಟಿ ವೆಚ್ಚದಲ್ಲಿ ಬಡತನ ನಿರ್ಮೂಲನೆ ಮಾಡಬಹುದು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೇಲ್ವಿಚಾರಣೆ ಕೊರತೆ ಇದ್ದು, ಹಗರಣಗಳಿಗೆಡೆ ಮಾಡಿಕೊಡುತ್ತಿದೆ. ಇಂಥ ಯೋಜನೆಗಳನ್ನು ಉತ್ತಮವಾಗಿಸಲು ಸಂಶೋಧಕರು ಹಾಗೂ ಸಂಶೋಧನಾ ಸಂಸ್ಥೆಗಳು ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ಯೋಜನೆ ಜಾರಿಯಲ್ಲಿ ಕೇವಲ ಅಂಕಿಅಂಶಗಳನ್ನಷ್ಟೇ ವಿಶ್ಲೇಷಿಸದೆ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾದ ಜರೂರತ್ತಿದೆ. ಪುರಾವೆ ಆಧಾರಿತ ನೀತಿ ರೂಪಿಸುವ ಹಾಗೂ ತೀರ್ಮಾನ ತೆಗೆದುಕೊಳ್ಳುವ ಅವಶ್ಯವಿದೆ ಎಂದು ಸಲಹೆ ನೀಡಿದರು.

ನಮ್ಮಲ್ಲಿ ಸಂಪನ್ಮೂಲದ ಕೊರತೆಯಿಲ್ಲ. ಆದರೆ, ಯೋಜನೆ ಅಥವಾ ಕಾರ್ಯಕ್ರಮಗಳ ಪ್ರಯೋಜನವನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಕೆಲ ನ್ಯೂನತೆಗಳಿವೆ ಎಂದು ತಿಳಿಸಿದರು.

‘ಗ್ರಾಮ್‌’ ಸಂಸ್ಥೆ ಅಧ್ಯಕ್ಷ ಡಾ.ಆರ್‌.ಬಾಲಸುಬ್ರಮಣ್ಯಂ ಮಾತನಾಡಿ, ಜನಕೇಂದ್ರಿತ ಕಾರ್ಯನೀತಿ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಮ್‌ ಹಮ್ಮಿಕೊಂಡಿರುವ ಕಾರ್ಯಾಗಾರವು ಸಹಾಯವಾಗಲಿದೆ. ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಸಂಶೋಧನಾ ವಿಧಾನಗಳ ಮೂಲಕ ಯೋಜನೆಗಳನ್ನು ಹೇಗೆ ವಿಶ್ಲೇಷಣೆ ಹಾಗೂ ಮೌಲ್ಯಮಾಪನ ಮಾಡಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗು ವುದು ಎಂದರು.

ಗ್ರಾಮ್‌ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಬಸವರಾಜು ಮಾತನಾಡಿದರು. ಮೂರು ವಾರಗಳ ಈ ಕಾರ್ಯಾಗಾರವನ್ನು ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಕಾರ್ನೆಲ್‌ ವಿ.ವಿಯ ಪ್ರಾಧ್ಯಾಪಕರಾದ ಸರೋಶ್‌ ಕುರುವಿಲ್ಲಾ, ಡಾ.ರೆಹನಾ ಹಕ್‌, ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ಯಾಮ್‌ ಕಶ್ಯಪ್‌, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.