ADVERTISEMENT

ವಿದ್ಯಾರ್ಥಿನಿಯರ ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:28 IST
Last Updated 27 ಮೇ 2017, 5:28 IST

ಮೈಸೂರು: ಡೆಂಗಿಗೆ ವಿದ್ಯಾರ್ಥಿನಿ ಸಂಚಿತಾ ಬಲಿಯಾಗಿದ್ದರಿಂದ ಆಕ್ರೋಶಗೊಂಡ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಅವ್ಯವಸ್ಥೆಯಿಂದಾಗಿ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಡೆಂಗಿ ವ್ಯಾಪಿಸುತ್ತಿದ್ದು, ವಾರ್ಡನ್‌ ಬದಲಿಸುವಂತೆ ಪಟ್ಟು ಹಿಡಿದರು. ಶುಚಿತ್ವ ಕಾಪಾಡಿ, ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ಇದನ್ನು ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರೂ ಬೆಂಬಲಿಸಿದರು.

ಸ್ಥಳಕ್ಕೆ ಧಾವಿಸಿದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರಘೋತ್ತಮ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಬಳಿಕ ವಾರ್ಡನ್‌ ಲತಾ ಅವರನ್ನು ಬದಲಿಸಿ ಮಹದೇವಸ್ವಾಮಿ ಎಂಬುವರನ್ನು ನಿಯೋಜಿಸಿರುವುದಾಗಿ ಪ್ರಕಟಿಸಿದರು.

ADVERTISEMENT

‘ಆವರಣದಲ್ಲಿ ಸ್ವಚ್ಛತೆಯ ಕೊರತೆ ಇದೆ. ಶೌಚಾಲಯವನ್ನು ನಿತ್ಯವೂ ಶುಚಿಗೊಳಿಸುತ್ತಿಲ್ಲ. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಓದುವ ವಾತಾವರಣ ಕೂಡ ಇಲ್ಲ. ಸೊಳ್ಳೆ ಕಾಟ ವಿಪರೀತವಾಗಿದೆ. ಬೀದಿ ನಾಯಿಗಳು ಕೊಠಡಿಗೆ ನುಗ್ಗಿ ಹಲವರಿಗೆ ಕಚ್ಚಿದ ನಿದರ್ಶನಗಳೂ ಇವೆ’ ಎಂದು ಆರೋಪಿಸಿದರು.

‘ಒಂದೂವರೆ ತಿಂಗಳಿಂದ ಹಾಸ್ಟೆಲ್‌ನಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಕುಡಿಯಲು, ಬಟ್ಟೆ ತೊಳೆಯಲು, ಸ್ನಾನ ಮಾಡಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒತ್ತಾಯ ಮಾಡಿದಾಗ ಮಾತ್ರ ಟ್ಯಾಂಕರ್ ಮೂಲಕ ಪೂರೈಸಲಾಗುತ್ತದೆ. ಇದು ಹಾಸ್ಟೆಲ್‌ನಲ್ಲಿರುವ 350 ವಿದ್ಯಾರ್ಥಿನಿಯರಿಗೆ ಸಾಕಾಗುವುದಿಲ್ಲ. ನೀರೆತ್ತುವ ಮೋಟಾರ್‌ ಕೂಡ ದುರಸ್ತಿಯಲ್ಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರವೇಶ ಪಡೆಯುವ ಸಂದರ್ಭದಲ್ಲಿ ₹ 7,000 ಮುಂಗಡ ಹಣ ಕಟ್ಟಿಸಿಕೊಳ್ಳಲಾಗುತ್ತದೆ. ಮಾಸಿಕ ₹ 1,500 ಮೆಸ್ ಬಿಲ್‌ ಪಾವತಿಸುತ್ತೇವೆ. ಹಣ ಕಟ್ಟುವುದರಲ್ಲಿ ಕೊಂಚ ತಡವಾದರೂ ವಾರ್ಡನ್‌ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ದೂರವಾಣಿ ಮೂಲಕ ಪೋಷಕರನ್ನು ಸಂಪರ್ಕಿಸಿ ತರಾಟೆ ತೆಗೆದುಕೊಳ್ಳುತ್ತಾರೆ. ಇದರಿಂದ ತಂದೆ–ತಾಯಿ ಕೂಡ ಮಾನಸಿಕವಾಗಿ ಕುಗ್ಗುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.