ADVERTISEMENT

ಸಹಜ ಸೌಂದರ್ಯಕ್ಕೆ ಕೃತಕ ಬಣ್ಣವೇಕೆ?

* ಕವಿಗಳ ಸ್ಫೂರ್ತಿಯ ಸೆಲೆ * ಮೈಸೂರಿಗರ ಅಭಿಮಾನದ ನೆಲೆ ಈ ಕುಕ್ಕರಹಳ್ಳಿ ಕೆರೆ

ಕೆ.ಓಂಕಾರ ಮೂರ್ತಿ
Published 28 ಫೆಬ್ರುವರಿ 2017, 10:40 IST
Last Updated 28 ಫೆಬ್ರುವರಿ 2017, 10:40 IST
ಸಹಜ ಸೌಂದರ್ಯಕ್ಕೆ ಕೃತಕ ಬಣ್ಣವೇಕೆ?
ಸಹಜ ಸೌಂದರ್ಯಕ್ಕೆ ಕೃತಕ ಬಣ್ಣವೇಕೆ?   

ಮೈಸೂರು: ‘ಕುವೆಂಪು, ತೇಜಸ್ವಿ ಇದ್ದಿದ್ದರೆ ಕುಕ್ಕರಹಳ್ಳಿ ಕೆರೆಯ ಸಹಜ ಸೌಂದರ್ಯಕ್ಕೆ ಕೃತಕ ಬಣ್ಣ ಬಳಿಯುವುದನ್ನು ಖಂಡಿತವಾಗಿ ವಿರೋಧಿಸುತ್ತಿದ್ದರು. ತಮ್ಮ ಸಾಹಿತ್ಯ ಸಾಧನೆಯ ಸ್ಫೂರ್ತಿಯ ತಾಣಕ್ಕೆ ಧಕ್ಕೆ ಉಂಟಾಗುವುದನ್ನು ಸಹಿಸುತ್ತಿರಲಿಲ್ಲ. ನಿಸರ್ಗದತ್ತ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವುದನ್ನು ನೋಡುತ್ತಾ ಸುಮ್ಮನಿರುತ್ತಿರಲಿಲ್ಲ...’

–ಕುವೆಂಪು ಅವರ ಮಗಳು ತಾರಿಣಿ ಹಾಗೂ ಅಳಿಯ ಡಾ.ಕೆ.ಚಿದಾನಂದಗೌಡ ಅವರು ‘ಪ್ರಜಾವಾಣಿ’ ಜೊತೆ ಮಾತ ನಾಡುತ್ತಾ ಕುಕ್ಕರಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಯನ್ನು ವಿರೋಧಿಸಿದ ಬಗೆ ಇದು.

ಕುಕ್ಕರಹಳ್ಳಿ ಕೆರೆ ಕೇವಲ ಜಲಮೂಲವಲ್ಲ; ಅದೊಂದು ಕಾವ್ಯ ದ್ರವ್ಯ. ಕುಡಿಯಲು, ಕೃಷಿಗೆ ನೀರು ಪೂರೈಸಿದ್ದಷ್ಟೇ ಅಲ್ಲ; ಸಾಹಿತ್ಯ ಕೃಷಿಗೂ ಕಾರಣವಾಗಿದೆ. ಕುವೆಂಪು, ಆರ್‌.ಕೆ. ನಾರಾಯಣ ಅವರಂಥ ಸುಪ್ರಸಿದ್ಧ ಸಾಹಿತಿಗಳಿಂದ ಜಗತ್ಪ್ರಸಿದ್ಧವಾಗಿದೆ. ಸಿನಿಮಾದವರ ಡಾರ್ಲಿಂಗ್‌ ಎನಿಸಿದೆ. ಜಲಚರ– ಪಕ್ಷಿಗಳ ವಾಸಕ್ಕೆ ತನ್ನೆದೆಯಲ್ಲಿ ಜಾಗ ಕಲ್ಪಿಸಿರುವ ಈ ಕೆರೆ ಅದೆಷ್ಟೊ ಪ್ರೇಮಿಗಳ ಹೃದಯ ಬೆಸೆದಿದೆ.

ADVERTISEMENT

ಕುಕ್ಕರಹಳ್ಳಿ ಕೆರೆ ಕುರಿತು ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದೆ. ಸಾಕ್ಷ್ಯಚಿತ್ರಗಳನ್ನು ತೆಗೆಯಲಾಗಿದೆ. ಪ್ರೇಮ್‌ ನಟನೆಯ ‘ನೆನಪಿರಲಿ’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಕೆರೆ ವೀಕ್ಷಣೆಗೆಂದು ಹೊರರಾಜ್ಯ ದಿಂದಲೂ ಪ್ರವಾಸಿಗರು ಬರುತ್ತಿದ್ದರು. ಆದರೆ, ಸಿನಿಮಾ ಚಿತ್ರೀಕರಣ, ಪ್ರವಾಸಿ ತಾಣಕ್ಕಿಂತ ಮಿಗಿಲಾಗಿ ಪರಿಸರ ಕೇಂದ್ರವಾಗಿ ಉಳಿಯಬೇಕೆಂಬುದು ಪರಿಸರವಾದಿಗಳ ಕೂಗು.

ತಮ್ಮ ಸಾಹಿತ್ಯ ಕೃಷಿಗೆ ಕುಕ್ಕರಹಳ್ಳಿ ಕೆರೆಯನ್ನು ವೇದಿಕೆ ಮಾಡಿಕೊಂಡ ಕುವೆಂಪು ಅವರು ಮಲೆನಾಡಿನ ಪರಿಸರವನ್ನು ಇಲ್ಲಿ ಕಂಡುಕೊಂಡರು. ಅವರು ಏರಿಯ ಮೇಲಿನ ಕಲ್ಲು ಬೆಂಚಿನ ಮೇಲೆ ಕುಳಿತು ಸೂರ್ಯಾಸ್ತಮಾನದ ಸೊಬಗು ಸವಿಯುತ್ತಿದ್ದ ದೃಶ್ಯ, ಏರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ರೀತಿ ಸೆರೆಯಾಗಿರುವ ಸಾಕ್ಷ್ಯಚಿತ್ರ ಕುವೆಂಪು–ಕುಕ್ಕರಹಳ್ಳಿ ಕೆರೆ ನಡುವಿನ ಬಾಂಧವ್ಯ ಬಿಚ್ಚಿಡುತ್ತದೆ.

‘ಕುವೆಂಪು ಹಾಗೂ ಕುಕ್ಕರಹಳ್ಳಿ ಕೆರೆಯನ್ನು ಭಿನ್ನವಾಗಿ ನೋಡಲು ಸಾಧ್ಯವೇ ಇಲ್ಲ. ಅವರ ಸಾಹಿತ್ಯ, ಕಾವ್ಯದೊಂದಿಗೆ ಈ ಕೆರೆ ಬೆರೆತು ಹೋಗಿದೆ. ಗಾಂಧೀಜಿಗೆ ಸ್ಫೂರ್ತಿಯಾದ ಅಮೆರಿಕದ ಸಾಹಿತಿ ಹೆನ್ರಿ ಡೇವಿಡ್‌ ಥೊರೆಯು ಅವರು ವಾಲ್ಡನ್‌ ಪಾಂಡ್‌ ಸೇರಿದಂತೆ ಹಲವು ಪುಸ್ತಕ ಬರೆದರು. ಅದಕ್ಕೆ ಪ್ರೇರಣೆ ಆಗಿದ್ದು ವಾಲ್ಡನ್‌ ಕೊಳ. ಹಾಗೆಯೇ, ಕುವೆಂಪು ಅವರಿಗೆ ಕುಕ್ಕರಹಳ್ಳಿ ಕೆರೆ ನೆಚ್ಚಿನ ತಾಣ’ ಎಂದು ವಿವರಿಸುತ್ತಾರೆ ಸಾಹಿತಿ ಪ್ರೊ.ಸಿ.ನಾಗಣ್ಣ.

ಕುವೆಂಪು ಮಾತ್ರವಲ್ಲ; ಎ.ಆರ್‌. ಕೃಷ್ಣಶಾಸ್ತ್ರಿ, ಎ.ಎನ್‌.ಮೂರ್ತಿರಾವ್‌, ಜಿ.ಎಸ್‌. ಶಿವರುದ್ರಪ್ಪ, ಟಿ.ಎಸ್‌. ವೆಂಕಣ್ಣಯ್ಯ, ಯು.ಆರ್‌. ಅನಂತ ಮೂರ್ತಿ, ಎಸ್‌.ಎಲ್‌.ಭೈರಪ್ಪ, ಕೆ.ವಿ.ಸುಬ್ಬಣ್ಣ... ಹೀಗೆ ಹಲವು ಕವಿಗಳು, ಸಾಹಿತಿಗಳು, ಚಿತ್ರ ನಿರ್ದೇಶಕರು, ಬರಹಗಾರರು ಹಾಗೂ ಪ್ರೇಮಿಗಳಿಗೆ ಪ್ರೇರಣೆ ನೀಡಿದಂಥ ಕುಕ್ಕರಹಳ್ಳಿ ಕೆರೆಯ ಪರಿಸರ ಈಗ ಮಲಿನಗೊಂಡಿದೆ. ಏರಿಯ ಮೇಲೆ ನಡೆಯುವಾಗ ದುರ್ವಾಸನೆ ಬರುತ್ತದೆ. ಈ ಕೆರೆಗೆ ಪದೇ ಪದೇ ಭೇಟಿ ನೀಡುತ್ತಿದ್ದ ಭಾರತೀಯ ಆಂಗ್ಲ ಸಾಹಿತಿ ಆರ್‌.ಕೆ.ನಾರಾಯಣ ಅವರು ಆಗಲೇ ಇಲ್ಲಿನ ಪರಿಸರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ನಾಗರಿಕರ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಪರಿಸರವಾದಿಗಳು ನೆನಪಿಸಿಕೊಳ್ಳುತ್ತಾರೆ. ಅವರ ‘ಮೈ ಡೇಸ್‌’ ಆತ್ಮಚರಿತ್ರೆಯಲ್ಲೂ ಕೆರೆಯ ಬಾಂಧವ್ಯ ನಮೂದಾಗಿದೆ.

‘ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ನಿವಾಸದ ಬಳಿ ಹರಿದು ಹೋಗುತ್ತಿದ್ದ ಝರಿಯೊಂದನ್ನು ಸ್ವಚ್ಛಗೊಳಿಸುತ್ತಾರೆ. ಆಗ ನೀರು ಬರುವುದೇ ನಿಂತು ಹೋಗುತ್ತದೆ. ಗಾಬರಿಗೊಂಡ ಅವರು ಆ ಝರಿಯನ್ನು ಮೊದಲಿನ ರೀತಿ ಮಾಡುತ್ತಾರೆ. ಮತ್ತೆ ನೀರು ಬರಲಾರಂಭಿಸುತ್ತದೆ. ಪರಿಸರ ವ್ಯವಸ್ಥೆಗೆ ಕೃತಕ ಬಣ್ಣ ಬಳಿಯಲು ಹೋಗಬಾರದು’ ಎಂಬುದು ಚಿದಾನಂದಗೌಡ ಅವರ ವಾದ.

ತಾರಿಣಿ, ಮೀನು, ಕುವೆಂಪು...
‘ನಾನು ಆಗ ಚಿಕ್ಕ ಹುಡುಗಿ. ಸಹೋದರ ತೇಜಸ್ವಿ ಒಮ್ಮೆ ಕುಕ್ಕರಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ನನ್ನನ್ನು ಕರೆದುಕೊಂಡು ಹೋಗಿದ್ದ. ನೀರಿನಲ್ಲಿ ತುಂಬಾ ಆಳಕ್ಕಿಳಿದು ಬಟ್ಟೆಯಲ್ಲಿ ಮೀನು ಹಿಡಿದು ಎಸೆಯುತ್ತಿದ್ದ. ದಡದಲ್ಲಿದ್ದ ನನಗಂತೂ ತುಂಬಾ ಭಯವಾಯಿತು. ಅವನು ಎಸೆಯುತ್ತಿದ್ದ ಮೀನುಗಳನ್ನು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಇಡುತ್ತಿದ್ದೆ. ಎಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ ಎಂಬ ಆತಂಕದಿಂದ ತಂದೆ ಕುವೆಂಪು ಅವರೇ ನಮ್ಮನ್ನು ಹುಡುಕಿಕೊಂಡು ಕೆರೆ ಬಳಿ ಬಂದರು. ಅವರನ್ನು ನೋಡಿ ಭಯದಿಂದ ಮೀನುಗಳನ್ನು ಮತ್ತೆ ಕೆರೆಯೊಳಗೆ ಎಸೆದು ಬಿಟ್ಟೆ. ನಮಗೆಲ್ಲಾ ಚೆನ್ನಾಗಿ ಬೈಯ್ದು ಮನೆಗೆ ಕರೆದುಕೊಂಡು ಹೋದರು’.

ಈ ಘಟನೆಯನ್ನು ಮತ್ತೆ ನೆನಪಿಸಿಕೊಂಡಿದ್ದು ಕುವೆಂಪು ಪುತ್ರಿ ತಾರಿಣಿ ಚಿದಾನಂದಗೌಡ. ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವಿರೋಧಿಸುತ್ತಲೇ ಕುವೆಂಪು–ಕುಕ್ಕರಹಳ್ಳಿ ಕೆರೆಯ ಒಡನಾಟ ಹಂಚಿಕೊಂಡರು.

‘ಈ ಕೆರೆಯ ಪರಿಸರವನ್ನು ತಂದೆಯವರು ತುಂಬಾ ಪ್ರೀತಿಸುತ್ತಿದ್ದರು. ಆ ಪ್ರೀತಿ ಅವರ ಅಕ್ಷರಗಳಲ್ಲಿಯೇ ಸೆರೆಯಾಗಿದೆ. ನಮ್ಮನ್ನು ಕರೆದುಕೊಂಡು ಕೆರೆಯ ಏರಿಯ ಮೇಲೆ ತಿರುಗಾಡುತ್ತಿದ್ದ ಕ್ಷಣ ಕಣ್ಮುಂದೆ ಹಾದು ಹೋಗುತ್ತದೆ’ ಎಂದು ನೆನಪಿಸಿಕೊಳ್ಳುತ್ತಾರೆ.

* ಪ್ರವಾಸೋದ್ಯಮಕ್ಕೆ ಬೇರೆಲ್ಲೂ ಜಾಗ ಇಲ್ಲವೇ? ಕೆರೆಯನ್ನು ಕೆರೆಯಾಗಿಯೇ ಉಳಿಸಿರಿ. ಇದು ಬೇರೆ ರೀತಿಯ ಕೆರೆ ಅಲ್ಲ. ಈಗಾಗಲೇ ಕೆರೆ ಪರಿಸರ ಹಾಳು ಮಾಡಲಾಗಿದೆ. ರಕ್ಷಣೆ ಅಗತ್ಯ
-ಪ.ಮಲ್ಲೇಶ್‌, ಸಮಾಜವಾದಿ

* ಮೈಸೂರು ವಿ.ವಿ ಚೆಲುವನ್ನು ಹೆಚ್ಚಿಸಿದ್ದೇ ಕುಕ್ಕರಹಳ್ಳಿ ಕೆರೆ. ಬೇರೆ ಯಾವುದೇ ವಿ.ವಿ.ಗಳಲ್ಲಿ ಇಂಥ ಪರಿಸರ ಇಲ್ಲ. ಒಳ್ಳೆಯ ಉದ್ದೇಶದಿಂದಲೇ ಇಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ
-ಪ್ರೊ.ಸಿ.ನಾಗಣ್ಣ, ಸಾಹಿತಿ

* ಕೆರೆಗೆ ನಿಸರ್ಗದತ್ತ ಸೌಂದರ್ಯವೇ ಸಾಕು, ಬಣ್ಣ ಹಚ್ಚುವುದು ಬೇಡ. ಕೆರೆಯ ಅಭಿವೃದ್ಧಿ ಕಾಮಗಾರಿಗೆ ಇದು ಸುಸಮಯವಲ್ಲ. ಇರುವ ನೀರು ಬತ್ತಿ ಹೋದರೆ ಪಕ್ಷಿಗಳ ಕಥೆಯೇನು?
-ಡಾ.ಕೆ.ಚಿದಾನಂದಗೌಡ, ನಿವೃತ್ತ ಕುಲಪತಿ, ಕುವೆಂಪು ವಿ.ವಿ

ಮೈಸೂರು ವಿ.ವಿ ವಿದ್ಯಾರ್ಥಿಗಳು ಏನು ಹೇಳುತ್ತಾರೆ?
ತೊಂದರೆ ಆಗಬಾರದು

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಯೋಜನೆ ಉತ್ತಮ ಚಿಂತನೆ. ಆದರೆ, ಈ ಕೆರೆ ತನ್ನ ನೈಜ ಸೊಬಗಿನಿಂದ ಜನರನ್ನು ಆಕರ್ಷಿಸುತ್ತಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯದಿಂದ ಜೀವಸಂಕುಲ ಹಾಗೂ ಸುತ್ತಮುತ್ತಲ ಮರಗಳಿಗೆ ತೊಂದರೆಯಾಗಬಾರದು
-ಆಕಾಶ್‌, ವಿದ್ಯಾರ್ಥಿ

ನೀರು ಬತ್ತುತ್ತದೆ
ಬೇಸಿಗೆಯಾದ್ದರಿಂದ ಈಗಾಗಲೇ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆರೆಯ ಹೂಳು ತೆಗೆಯುವುದರಿಂದ ನೀರು ಬತ್ತಿ ಹೋಗಿ ಪಕ್ಷಿ ಸಂಕುಲಕ್ಕೆ ತೊಂದರೆಯಾಗುತ್ತದೆ. ಒಮ್ಮೆ ಪಕ್ಷಿಗಳಿಗೆ ತೊಂದರೆ ಉಂಟಾದರೆ ಅವು ಮತ್ತೆ ಈ ಕಡೆ ಸುಳಿಯುವುದಿಲ್ಲ
-ಸ್ಫೂರ್ತಿ, ವಿದ್ಯಾರ್ಥಿನಿ

ಕೃತಕ ಸೌಂದರ್ಯ ಬೇಡ
ಕುಕ್ಕರಹಳ್ಳಿ ಕೆರೆ ಹೂಳು ತೆಗೆಯುವುದರಿಂದ ಅಂತರ್ಜಲ ಮಟ್ಟ ತಗ್ಗಲಿದೆ. ಸಲ್ಲದ ಅಭಿವೃದ್ಧಿ ಹೆಸರಿನಲ್ಲಿ ಕೃತಕ ಸೌಂದರ್ಯ ಸೃಷ್ಟಿಯಾದರೆ ಪ್ರವಾಸಿಗರು, ವಾಯುವಿಹಾರಿಗಳು ಈ ಕಡೆ ತಲೆ ಹಾಕುವುದಿಲ್ಲ
-ಕಿರಣ್ ಬಾಬು, ಸಂಶೋಧನಾ ವಿದ್ಯಾರ್ಥಿ

ಶುದ್ಧೀಕರಿಸಿದ ನೀರು ಹರಿಸಿ
ಕೆರೆ ಸುತ್ತಮುತ್ತಲ ಇರುವ ನೈಜ ಸೌಂದರ್ಯವನ್ನು ಹಾಳು ಮಾಡುವಂತಹ ಯೋಜನೆಗಳ ಬದಲಾಗಿ ಕೆರೆಯ ಮೇಲ್ಭಾಗದಲ್ಲಿನ ಬಡಾವಣೆಗಳಿಂದ ಹರಿದು ಬರುವ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸುವ ಕೆಲಸ ಆಗಬೇಕಿದೆ. ಇದರಿಂದ ಇಲ್ಲಿನ ಪಕ್ಷಿ ಸಂಕುಲಕ್ಕೂ ಒಳಿತು
-ಬಿ.ಮೇಘನಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.