ADVERTISEMENT

ಸಾಧನೆಗೆ ಅಡ್ಡಿ ಬಾರದ ಅಂಗವಿಕಲತೆ

ಸ್ವಾವಲಂಬಿಯಾಗಿ ಇತರರ ಬಾಳಿಗೂ ಬೆಳಕಾದ ಸಾಧಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:43 IST
Last Updated 9 ಜನವರಿ 2017, 8:43 IST
ವರುಣಾ ಬಳಿ ಇರುವ ಪಿ.ಜಿ.ಹುಂಡಿ ಗ್ರಾಮದ ಎನ್‌.ನಂಜುಂಡಸ್ವಾಮಿ ಹಾಗೂ ಮಹಿಳೆಯರು ಗಂಧದಕಡ್ಡಿ ತಯಾರಿಕೆಯಲ್ಲಿ ತೊಡಗಿರುವುದು
ವರುಣಾ ಬಳಿ ಇರುವ ಪಿ.ಜಿ.ಹುಂಡಿ ಗ್ರಾಮದ ಎನ್‌.ನಂಜುಂಡಸ್ವಾಮಿ ಹಾಗೂ ಮಹಿಳೆಯರು ಗಂಧದಕಡ್ಡಿ ತಯಾರಿಕೆಯಲ್ಲಿ ತೊಡಗಿರುವುದು   

ವರುಣಾ: ಸಾಧಿಸಬೇಕು ಎಂಬ ಛಲ ಇದ್ದರೆ ಮನುಷ್ಯನಿಗೆ ಯಾವುದೇ ತೊಂದರೆ ಅಡ್ಡಿಬಾರದು. ಅಂಗ ವಿಕಲತೆ ಇದ್ದರೂ ಅದನ್ನು ಮೆಟ್ಟಿನಿಂತ ಪಿ.ಜಿ.ಹುಂಡಿ ಗ್ರಾಮದ ಎನ್‌.ನಂಜುಂಡ ಸ್ವಾಮಿ ಮಾದರಿಯಾಗಿ ಕಾಣುತ್ತಾರೆ.

ನಂಜುಂಡಸ್ವಾಮಿ ಅವರು ಬಿಎ ಪದವಿ ಪೂರೈಸಿ, ಟಿಸಿಎಚ್‌ ಮಾಡಿದ್ದರು. ಸರ್ಕಾರಿ ಕೆಲಸಕ್ಕೆ ಕೈ ಚಾಚದೆ ಗ್ರಾಮದಲ್ಲಿ ಗೃಹ ಕೈಗಾರಿಕೆಯತ್ತ ಮನಸ್ಸು ಮಾಡಿದರು. ಗಂಧದ ಕಡ್ಡಿ ತಯಾರಿಕೆ ಮೂಲಕ ಇಪ್ಪತ್ತು ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ದಾರಿಯಾದರು.

ಪೋಲಿಯೊ ಬಾಧಿಸಿ ಒಂದು ಕಾಲು ಸ್ವಾಧೀನ ಕಳೆದುಕೊಂಡರೂ ಅದರ ಬಗ್ಗೆ ಯೋಚನೆ ಮಾಡದೆ ಸ್ವಾವಲಂಬಿಯಾಗಿ ಸಾಧನೆ ಮಾಡುತ್ತಿದ್ದಾರೆ.
ಮೈಸೂರಿನ ಖಾಸಗಿ ಅಗರಬತ್ತಿ ಕಂಪೆನಿ ನೀಡುವ ಕಚ್ಚಾ ವಸ್ತುಗಳನ್ನು ಸಿದ್ಧ ಮಾಡಿ ತಿಂಗಳಿಗೆ ಹತ್ತು ಸಾವಿರ ರೂಪಾಯಿಯ ದುಡಿಮೆ ಮಾಡುತ್ತಿ ದ್ದಾರೆ. ಅವರ ಜತೆ ಕೆಲಸ ಮಾಡುವ ಕೆಲಸಗಾರರಿಗೆ ತಿಂಗಳಿಗೆ ಸುಮಾರು ₹ 5 ಸಾವಿರ ಆದಾಯ ಬರುವಂತೆಯೂ ಮಾಡಿದ್ದಾರೆ.

ಹೋಬಳಿಮಟ್ಟದಲ್ಲಿ ಇರುವ ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸವಲತ್ತು, ಸ್ವಾವಲಂಬನೆಗೆ ಅಗತ್ಯವಾದ ಕೆಲಸ ನಿರ್ವಹಿಸುವ ಬಗ್ಗೆಯೂ ಸಲಹೆ ನೀಡುತ್ತಾರೆ. ಹಳ್ಳಿಗಳಲ್ಲಿ ಅನೇಕ ಮಂದಿ ಸಮಯ ಹಾಳು ಮಾಡುತ್ತಾರೆ. ಆದರೆ ಗೃಹ ಕೈಗಾರಿಕೆಯಾಗಿ ಹಲವಾರು ಉದ್ಯೋಗಗಳನ್ನು ಮಾಡಬಹುದು. ಕೆಲವರು ಪ್ರತಿಷ್ಠೆಯ ಕಾರಣದಿಂದ ಸ್ವಾವಲಂಬಿ ಉದ್ಯೋಗಗಳಿಂದದೂರ ಉಳಿಯುತ್ತಾರೆ. ದುಡಿಯುವ ಹಂಬಲ, ಕೌಶಲ ಇದ್ದರೆ ಗ್ರಾಮಾಂತರ ಪ್ರದೇಶದಲ್ಲಿ ಸ್ವಾವಲಂಬ ಬದುಕು ಸಾಧಿಸಬಹುದು ಎನ್ನುತ್ತಾರೆ ನಂಜುಂಡ ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.