ADVERTISEMENT

ಸಾವಯವ ಸಂಶೋಧನಾ ಕೇಂದ್ರಕ್ಕೆ ಶತಕ ಸಂಭ್ರಮ

ಕೆ.ಎಸ್.ಗಿರೀಶ್
Published 14 ಮಾರ್ಚ್ 2017, 6:30 IST
Last Updated 14 ಮಾರ್ಚ್ 2017, 6:30 IST

ಮೈಸೂರು: ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರಕ್ಕೆ ಶತಕದ ಸಂಭ್ರಮ.

ಇದರ ಅಂಗವಾಗಿ ಸಂಶೋಧನಾ ಕೇಂದ್ರವು ವರ್ಷಪೂರ್ತಿ ನಿರಂತರವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ನಿರ್ಧರಿಸಿದೆ. ಮಾರ್ಚ್ 17ರಂದು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್. ಶಿವಣ್ಣ ಇದಕ್ಕೆ ಚಾಲನೆ ನೀಡಲಿದ್ದಾರೆ. ನವೆಂಬರ್‌ನಲ್ಲಿ ದೊಡ್ಡಮಟ್ಟದಲ್ಲಿ ಸಮಾ ರೋಪ ಸಮಾರಂಭ ನಡೆಯಲಿದೆ.

ಏನಿದರ ಇತಿಹಾಸ?: 1917ರ ಮಾರ್ಚ್ 17ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಭಾಗ ಗಳಲ್ಲಿ ಕೃಷಿಗೆ ಪೂರಕವಾದ ಕಾರ್ಯ ಕ್ರಮಗಳನ್ನು ಕೈಗೊಳ್ಳಲು ಕೃಷಿ ವಿಜ್ಞಾನ ಕೇಂದ್ರವೊಂದನ್ನು ಸ್ಥಾಪಿಸಲು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದರು. ನಂತರ, ವಿಶ್ವೇಶ್ವರಯ್ಯ ಇದಕ್ಕೊಂದು ಸ್ಪಷ್ಟ ರೂಪ ನೀಡಿದರು. ಮೊದಲ ವಿಜ್ಞಾನಿಗಳಾಗಿ ಕೋಲ್ಮನ್ ಇಲ್ಲಿ ಅಧಿಕಾರ ವಹಿಸಿಕೊಂಡರು.

ADVERTISEMENT

ಅಷ್ಟೊತ್ತಿಗಾಗಲೇ ಕಾವೇರಿ ನದಿಗೆ ಅಡ್ಡವಾಗಿ ಕೆಆರ್ಎಸ್ ಅಣೆಕಟ್ಟೆಯ ಕಾಮಗಾರಿ ಆರಂಭವಾಗಿತ್ತು. ಅದರ ನೀರನ್ನು ಕೃಷಿಗೆ ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಸ್ಪಷ್ಟ ರೂಪರೇಷೆಯನ್ನು ಸಿದ್ದಪಡಿಸುವುದು ಆರಂಭದಲ್ಲಿ ಇದರ ಕಾರ್ಯವಾಗಿತ್ತು.

65 ಎಕರೆ ಪ್ರದೇಶದಲ್ಲಿ ಸ್ಥಾಪನೆಗೊಂಡ ಕೃಷಿ ವಿಜ್ಞಾನ ಕೇಂದ್ರ 1917ರಿಂದ 1965ರವರೆಗೆ ಕೃಷಿ ಇಲಾಖೆಯ ಸುಪರ್ದಿಯಲ್ಲಿತ್ತು. 1965ರಿಂದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ತೆಕ್ಕೆಗೆ ಇದು ಜಾರಿತು.

ಮರಳಿ ಸಾವಯವದೆಡೆಗೆ!: 1917 ರಿಂದ 1965ರವರೆಗೆ ಸಾವಯವ ಕೃಷಿ ಯನ್ನು ಈ ಕೇಂದ್ರ ಅಳವಡಿಸಿ ಕೊಂಡಿತ್ತು. ಆ ನಿಟ್ಟಿನಲ್ಲಿಯೇ ಸಾಕಷ್ಟು ಸಂಶೋಧನೆಗಳು ಆದವು. ನಂತರ, 1965ರಿಂದ 2005ರವರೆಗೆ ಸಮಗ್ರ ಕೃಷಿ ಪದ್ದತಿಯನ್ನು ಇದು ಅಳವಡಿಸಿ ಕೊಂಡಿತು. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ, ಕುರಿ, ಹಂದಿ ಸಾಕಣೆ ಸೇರಿದಂತೆ ಇತರ ಉಪಕಸುಬುಗಳನ್ನು ಒಳ ಗೊಂಡಂತಹ ಬೇಸಾಯ ಪದ್ಧತಿಯನ್ನು ಇದು ಪರಿಚಯಿಸಿತು. 2005ರ ನಂತರ ಮತ್ತೆ ಸಾವಯವ ಕೃಷಿಯ ಕಡೆಗೆ ಇದು ವಾಲಿತು. ಈಗಲೂ ಸಾವಯವ ಕೃಷಿ ಸಂಶೋಧನಾ ಕೇಂದ್ರವಾಗಿಯೇ ಇದು ಕಾರ್ಯನಿರ್ವಹಿಸುತ್ತಿದೆ.

ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಸ್ತರಣೆ ಘಟಕವೂ ಇದೆ. ಜತೆಗೆ, ಭಾರತೀಯ ಹವಾಮಾನ ಇಲಾ ಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ 1968ರಿಂದ ಆರಂಭಗೊಂಡಿದೆ. ಇದು ಮೈಸೂರು, ಕೊಡಗು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಹವಾಮಾನ ಮುನ್ಸೂಚನೆ ನೀಡುತ್ತಿದೆ.

**

ಭತ್ತದ ತಳಿಗಳ ಕಣಜ; ಸಂಶೋಧನೆಗೆ ಖ್ಯಾತಿ

ಸಂಶೋಧನಾ ವಲಯದಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರವು ಭತ್ತದ ತಳಿಗಳ ಸಂಶೋಧನೆಗೆ ಹೆಸರಾಗಿದೆ. 1936ರಲ್ಲಿ ಆಲೂರು ಸಣ್ಣ ಭತ್ತವನ್ನು ಮೊದಲ ಬಾರಿಗೆ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ನಂತರ, ಇಲ್ಲಿವರೆಗೆ ಭತ್ತದ 25 ಹೊಸ ತಳಿಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಸದ್ಯ, ಇಲ್ಲಿನ 65 ಎಕರೆ ಪ್ರದೇಶದಲ್ಲಿ 15 ಎಕರೆ ಭತ್ತ, 5 ಎಕರೆ ರಾಗಿ, 20 ಎಕರೆ ತೋಟಗಾರಿಕಾ ಬೆಳೆಗಳಿಗೆ ಸಂಬಂಧಪಟ್ಟಂತೆ ಪ್ರಯೋಗಕಾರ್ಯ ನಡೆಯುತ್ತಿದೆ. ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಅಧೀಕ್ಷಕ ಡಾ.ಸಿ.ಗೋವಿಂದರಾಜು, ವಿಸ್ತರಣಾ ಘಟಕದಲ್ಲಿ ಡಾ.ದೊರೆಸ್ವಾಮಿ ಸೇರಿದಂತೆ 5 ಮಂದಿ ವಿಜ್ಞಾನಿಗಳು, 30 ಸಿಬ್ಬಂದಿ ಇಲ್ಲಿ ಇದ್ದಾರೆ.
ಕೇಂದ್ರ ದೂರವಾಣಿ ಸಂಖ್ಯೆ 0821– 2591267.

**

ವರ್ಷಪೂರ್ತಿ ಹೊಸಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಸಾವಯವ ಕೃಷಿಯನ್ನು ಮತ್ತೆ ಬಳಕೆಗೆ ತರಲು ಶ್ರಮಿಸಲಾಗುವುದು
-ಡಾ.ಸಿ.ಗೋವಿಂದರಾಜು
ಹಿರಿಯ ಕ್ಷೇತ್ರ ಅಧೀಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.