ADVERTISEMENT

ಹಿಂದೂಗಳ ಸಂಖ್ಯಾಬಲ ಕುಗ್ಗಲು ನೀವೇ ಕಾರಣ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ಗೆ ಖರ್ಗೆ ಪರೋಕ್ಷ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:31 IST
Last Updated 29 ಆಗಸ್ಟ್ 2016, 11:31 IST

ಸುತ್ತೂರು (ಮೈಸೂರು):  ‘ಹಿಂದೂಗಳ ಜನಸಂಖ್ಯೆ ಬೆಳೆಸಲು ಯಾವುದೇ ವ್ಯಕ್ತಿ, ಕಾನೂನು ಅಡ್ಡಿಯಾಗಿಲ್ಲ. ಜನಸಂಖ್ಯೆ ಹೆಚ್ಚಿಸಲು ಹಿಂದೇಟು ಹಾಕಬಾರದು ಎಂದು ಮುಖಂಡರೊಬ್ಬರು ಹೇಳಿದ್ದಾರೆ. ಹಿಂದೂಗಳ ಜನಸಂಖ್ಯೆ ಕಡಿಮೆ ಆಗಲು ಕುಟುಂಬ ಯೋಜನೆ ಕಾರಣ ಅಲ್ಲ. ಸಮಾಜದಲ್ಲಿರುವ ಅಸ್ಪೃಶ್ಯತೆ, ಭೇದ–ಭಾವ, ಅಸೂಯೆಂದಾಗಿ ಹಿಂದೂ ಧರ್ಮವನ್ನು ಬಿಟ್ಟು ಹೋಗಿರುವುದರಿಂದ ನಿಮ್ಮ ಸಂಖ್ಯಾಬಲ ಕಡಿಮೆ ಆಗಿದೆ. ಇದಕ್ಕೆ ಬೇರಾರೂ ಕಾರಣವಲ್ಲ. ಬದಲಾಗಿ ನೀವೇ ಕಾರಣ...’

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿ ಭಾನುವಾರ ನೀಡಿದ ತಿರುಗೇಟು ಇದು. ತಮ್ಮ ಭಾಷಣದಲ್ಲಿ ಹೆಸರು ಪ್ರಸ್ತಾಪಿಸದೆ ಅವರು ಚಾಟಿ ಬೀಸಿದರು.

ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಅಂಗವಾಗಿ ಭಾನುವಾರ ನಡೆದ ಜೆಎಸ್‌ಎಸ್‌ ಗುರುಕುಲ ಅಮೃತ ಮಹೋತ್ಸವದಲ್ಲಿ ಮಾತನಾಡಿದರು.

‘ಬಸವಣ್ಣ ಅವರು ಅನುಭವ ಮಂಟಪ ಮಾಡಿ ಎಲ್ಲ ಜಾತಿ,  ಧರ್ಮಗಳನ್ನು ಒಂದಾಗಿ ಮಾಡದೆ ಇರುತ್ತಿದ್ದರೆ ಕರ್ನಾಟಕದಲ್ಲಿ ಇಷ್ಟೊಂದು ವೈಚಾರಿಕತೆ, ಪ್ರಗತಿಪರ ವಿಚಾರಧಾರೆಗಳು ಇರುತ್ತಿರಲಿಲ್ಲ’ ಎಂದು ಹೇಳಿದರು.

‘ಜೆಎಸ್‌ಎಸ್‌ ಮಠ ಸೇರಿದಂತೆ ಹಲವು ಮಠಗಳು ಪ್ರಗತಿಪರ ವಿಚಾರಗಳ ಮೂಲಕ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿವೆ. ಇದು ಪ್ರಶಂಸನೀಯ ಕಾರ್ಯ. ಆದರೆ, ದೇಶದಲ್ಲಿ ಇರುವ ಕೆಲವು ಮಠಗಳು ಸಮಾಜವನ್ನು ಒಡೆಯುವ ಕೆಲಸವನ್ನೂ ಮಾಡಿವೆ. ಈ ಪೈಕಿ ಯಾವುದು ಒಳ್ಳೆಯದು ಎಂಬುದನ್ನು ದೇಶಭಕ್ತರು ಯೋಚನೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಮಹಾದಾಯಿ ನದಿ ವಿವಾದ ಬಗೆಹರಿಸಿ
‘ಇನ್ನು 3 ವರ್ಷದೊಳಗೆ ದೇಶದ ಎಲ್ಲ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್ ಹೇಳಿದ್ದರು.ಈ ಕಾರ್ಯವನ್ನು ಮಹಾದಾಯಿ ನೀರನ್ನು ಉತ್ತರ ಕರ್ನಾಟಕ್ಕೆ ಹರಿಸುವ ಮೂಲಕ ಈಗಿನಿಂದಲೇ ಆರಂಭಿಸಲಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಒತ್ತಾಯಿಸಿದರು.

ಜೆಎಸ್‌ಎಸ್‌ ಗುರುಕುಲ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಕಷ್ಟದ ದಿನಗಳು ಎದುರಾಗಿವೆ. ಮಹಾದಾಯಿ ನದಿ ನೀರಿಗಾಗಿ ಉತ್ತರ ಕರ್ನಾಟಕದ ಜನ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಕೇವಲ 10 ನಿಮಿಷದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸಾಧ್ಯ ಇದೆ. ಆಗ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಮೂಡುತ್ತದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಅತ್ಯಾಚಾರಕ್ಕೊಳಗಾದ 16 ವರ್ಷದ ಬಾಲಕಿ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದು, ಆಕೆ ರಿಮಾಂಡ್‌ ಹೋಮ್‌ನಲ್ಲಿ ಇದ್ದಾಳೆ.ಪೋಷಕರೂ ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದ ಆಕೆಯ ಪೋಷಕರನ್ನು ಬೆಂಗಳೂರಿಗೆ ಕರೆತಂದು ಅವರನ್ನು ಒಪ್ಪಿಸಿ ಬಾಲಕಿಯನ್ನು ಅವರ ಜತೆ ಸೇರಿಸಲು ಪ್ರಯತ್ನಿಸುತ್ತಿದ್ದೇನೆ. ಅತ್ಯಾಚಾರ ಮಾಡಿದ ಯುವಕನೂ ಜೈಲು ಸೇರಿದ್ದಾನೆ. ಆತನನ್ನೂ ಒಪ್ಪಿಸಿ ಅವರಿಬ್ಬರೂ ಮದುವೆ ಮಾಡಿಕೊಳ್ಳುವಂತೆ ಮಾಡಿ ಮಾನವೀಯತೆ ಮೆರೆಯಬೇಕು. ಅಂಥ ಕುಟುಂಬಗಳಿಗೆ ನೆರವಾಗಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.