ADVERTISEMENT

ಉಡಾನ್‌ 3 ಯೋಜನೆ ಡಿಸೆಂಬರ್‌ಗೆ ಚಾಲನೆ

ಸಂಸದ ಪ್ರತಾಪಸಿಂಹ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 12:17 IST
Last Updated 7 ಜುಲೈ 2018, 12:17 IST

ಮೈಸೂರು: ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ‘ಉಡಾನ್‌ (ಶ್ರೀಸಾಮಾನ್ಯನಿಗೂ ವಿಮಾನಯಾನ ಯೋಗ) 3’ ಯೋಜನೆಯು ಡಿಸೆಂಬರ್‌ನಲ್ಲಿ ಜಾರಿಗೊಳ್ಳಲಿದೆ. ಬಳಿಕ, ಮೈಸೂರು ಸುತ್ತಮುತ್ತಲಿನ ಪ್ರಮುಖ ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಕೇಂದ್ರ ಸರ್ಕಾರವು 4 ವರ್ಷಗಳಲ್ಲಿ ಮಾಡಿರುವ ಸಾಧನೆ ಹಾಗೂ ಮೈಸೂರಿಗೆ ನೀಡಿರುವ ಕೊಡುಗೆಗಳ ಕುರಿತು ಮಾಹಿತಿ ನೀಡಲು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಯೋಜನೆಯಡಿ 2 ಹಾಗೂ 3ನೇ ಹಂತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತದೆ. 2ನೇ ಹಂತದ ನಗರವಾದ ಚೆನ್ನೈಗೆ ಈಗಾಗಲೇ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಮೂರನೇ ಹಂತದ ಯೋಜನೆ ಜಾರಿಗೊಂಡರೆ ಮಂಗಳೂರು, ಹುಬ್ಬಳ್ಳಿ, ಕೊಚ್ಚಿ ಮುಂತಾದ ನಗರಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಇದಕ್ಕಾಗಿ ವಿಮಾನಯಾನ ಸಂಸ್ಥೆಗಳಿಂದ ಹೆಚ್ಚಿನ ಬಿಡ್‌ಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ADVERTISEMENT

ಹವಾಯಿ ಚಪ್ಪಲಿ ಹಾಕುವವರು ವಿಮಾನ ಹತ್ತಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆ. ಹೀಗಾಗಿ, ಈ ಯೋಜನೆಯಡಿ ಮೊದಲ 40 ಸೀಟುಗಳಿಗೆ ವಿಶೇಷ ರಿಯಾಯಿತಿ ದರದ ಸೌಲಭ್ಯ ನೀಡಲಾಗುತ್ತದೆ ಎಂದರು.

ರನ್‌ವೇ ವಿಸ್ತರಣೆ: ಮೈಸೂರಿನಿಂದ ದೆಹಲಿ, ಮುಂಬೈ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಬೇಕಾದರೆ ಇಲ್ಲಿನ ರನ್‌ವೇ ವಿಸ್ತರಣೆ ಆಗಬೇಕು. ಹೀಗಾಗಿ, ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಅಂಡರ್‌ಪಾಸ್‌ ಟನಲ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೇಲ್ಭಾಗದಲ್ಲಿ ರನ್‌ವೇ ಹಾಗೂ ಕೆಳಭಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ 160 ಎಕರೆ ಭೂಮಿ ಅಗತ್ಯವಿದೆ. ಜಾಗ ಸಿಕ್ಕ ಬಳಿಕ ರನ್‌ವೇ ವಿಸ್ತರಣೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

₹11 ಸಾವಿರ ಕೋಟಿ ಅನುದಾನ: ಕೇಂದ್ರ ಸರ್ಕಾರವು ಮೈಸೂರಿನ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ನಾಲ್ಕು ವರ್ಷಗಳಲ್ಲಿ ₹11 ಸಾವಿರ ಕೋಟಿ ಅನುದಾನ ನೀಡಿದೆ ಎಂದು ತಿಳಿಸಿದರು.

20 ಸಾವಿರ ಜನರಿಗೆ ಪಾಸ್‌ಪೋರ್ಟ್‌: ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪಿಸಿದ್ದು, ಈವರೆಗೆ 20 ಸಾವಿರ ಜನರಿಗೆ ಪಾಸ್‌ಪೋರ್ಟ್‌ಗಳನ್ನು ತ್ವರಿತಗತಿಯಲ್ಲಿ ವಿತರಿಸಲಾಗಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಸಂದರ್ಭದಲ್ಲಿ ದೇಶದಲ್ಲಿ 77 ಸೇವಾ ಕೇಂದ್ರಗಳಿದ್ದವು. ಬಿಜೆಪಿ ಸರ್ಕಾರ ಬಂದ ಬಳಿಕ 344 ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ 7 ಸೇವಾ ಕೇಂದ್ರಗಳು ಸಿಕ್ಕಿವೆ. ಕೊಡಗು ಜಿಲ್ಲೆಯನ್ನು ಮಂಗಳೂರು ಸೇವಾ ಕೇಂದ್ರಕ್ಕೆ ಸೇರಿಸಲಾಗಿದೆ. ಅದನ್ನು ಮೈಸೂರು ವಿಭಾಗಕ್ಕೆ ಸೇರಿಸುವಂತೆ ಬೇಡಿಕೆ ಇದೆ. ಆ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.