ADVERTISEMENT

ಅನುಪಾಲನಾ ವರದಿ ತಿದ್ದಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 11:10 IST
Last Updated 16 ನವೆಂಬರ್ 2017, 11:10 IST
ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಬುಧವಾರ ನಡೆಯಿತು.
ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಬುಧವಾರ ನಡೆಯಿತು.   

ಲಿಂಗಸುಗೂರು: ಹಿಂದಿನ ಸಭೆಯಯಲ್ಲಿ ಚರ್ಚೆಯಾಗಿದ್ದ ವರದಿಯನ್ನು ಯಥಾವತ್ತಾಗಿ ನೀಡದೆ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ಅನುಪಾಲನಾ ವರದಿ ನೀಡುವ ಮೂಲಕ ಸದಸ್ಯರಿಗೆ ಅಗೌರವ ತೋರಿದ್ದೀರಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಬಸಮ್ಮ ಪರಮೇಶ ಯಾದವ ಆರೋಪಿಸಿದರು.

ಬುಧವಾರ ಸಾಮಾನ್ಯ ಸಭೆಗೆ ಸದಸ್ಯರನ್ನು ಕರೆತರಲು ಅಧಿಕಾರಿಗಳು ಹರಸಾಹಸ ಮಾಡುವಂತಾಯಿತು. ಒಂದು ಗಂಟೆ ತಡವಾಗಿ ಸಭೆ ಆರಂಭವಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ ಸದಸ್ಯರ ಕ್ಷಮೆಯಾಚಿಸಿದರು. ಮುಂದೆ ಇಂತಹ ಲೋಪ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ಗವಿಸಿದ್ದಪ್ಪ ಸಾಹುಕಾರ, ಲಿಂಗರಾಜ ಹಟ್ಟಿ, ವಾಹಿದ್‌ ಖಾದ್ರಿ ಧ್ವನಿಗೂಡಿಸಿದರು. ಆರೋಗ್ಯ ಇಲಾಖೆ ಸ್ವಚ್ಛತೆ, ಸಾಮಾನ್ಯ ಜನರ ಆರೋಗ್ಯ ಸಂರಕ್ಷಣೆ ಹಾಗೂ ಆಸ್ಪತ್ರೆಗಳ ನಿರ್ವಹಣೆ ನಿರ್ಲಕ್ಷ್ಯದ ಬಗ್ಗೆ ಗಮನ ಸೆಳೆದರು.

ADVERTISEMENT

ಬಹುತೇಕ ಇಲಾಖೆಗಳು ನೀಡಿರುವ ಅನುಪಾಲನ ವರದಿ ಸತ್ಯಕ್ಕೆ ದೂರವಾದ ಅಂಶಗಳನ್ನು ಹೊಂದಿವೆ. ಸಭೆಗೆ ಕಾಟಾಚಾರದ ಮಾಹಿತಿ ನೀಡಿ ಸದಸ್ಯರ ಕಣ್ಣಿಗೆ ಮಣ್ಣೆರೆಚುವ ತಂತ್ರ ಅನುಸರಿಸಿದ್ದಾರೆ. ಯಾವೊಂದು ಇಲಾಖೆ ಅಧಿಕಾರಿಗಳು ವಾಸ್ತವ ಮಾಹಿತಿ ನೀಡಿಲ್ಲ ಎಂದು ಗವಿಸಿದ್ದಪ್ಪ ಸಾಹುಕಾರ, ಮೌನೇಶ, ಬಸಮ್ಮ ಯಾದವ ಆರೋಪಿಸಿದರು.

ಅಸಮರ್ಪಕ ವಿದ್ಯುತ್‌ ಪೂರೈಕೆ, ಕಂಬಗಳ ಸ್ಥಳಾಂತರ, ವಿದ್ಯುತ್‌ ಪರಿವರ್ತಕ ಸಮಸ್ಯೆ ಕುರಿತು ಸದಸ್ಯರು ಚರ್ಚೆ ನಡೆಸಿದರು.
ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.