ADVERTISEMENT

ಎಚ್‌ಐವಿ ಮುಕ್ತ ಸಮಾಜಕ್ಕೆ ಕೈಜೋಡಿಸಿ

ಎಚ್‌ಐವಿ/ಏಡ್ಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಕುಲಕರ್ಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:52 IST
Last Updated 30 ಜನವರಿ 2017, 6:52 IST
ಎಚ್‌ಐವಿ ಮುಕ್ತ ಸಮಾಜಕ್ಕೆ ಕೈಜೋಡಿಸಿ
ಎಚ್‌ಐವಿ ಮುಕ್ತ ಸಮಾಜಕ್ಕೆ ಕೈಜೋಡಿಸಿ   
ರಾಯಚೂರು: ವಿಶ್ವ ಏಡ್ಸ್‌ ತಡೆ ಕಾರ್ಯಕ್ರಮದ ಈ ವರ್ಷದ ಧ್ಯೇಯ ವಾಕ್ಯ ‘ಕೈ ಜೋಡಿಸಿ’ ಎಂಬುದಾಗಿದೆ. ಅದರ ಅರ್ಥ ಕಳಂಕ, ತಾರತಮ್ಯವನ್ನು ಹೋಗಲಾಡಿಸಲು, ಎಚ್ಐವಿ ಸೋಂಕು ಮುಕ್ತ ಸಮಾಜವನ್ನು ನಿರ್ಮಿಸಿ ಏಡ್ಸ್ರೋಗದ ಸಾವುಗಳನ್ನು ಶೂನ್ಯಕ್ಕೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ನವೋದಯ ವೈದ್ಯಕೀಯ ಕಾಲೇಜಿನ ಡಾ.ಸಿ.ಎನ್. ಕುಲಕರ್ಣಿ ಹೇಳಿದರು.
 
ನಗರದ  ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಸ್ಮಾರಕ ಕಾಲೇಜಿನಲ್ಲಿ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ರೆಡ್ ರಿಬ್ಬನ್ ಕ್ಲಬ್, ಯುವ ರೆಡ್ ಕ್ರಾಸ್ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ  ಎಚ್‌ಐವಿ/ಏಡ್ಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 
ಎಚ್ಐವಿ ಸೋಂಕು ಬಿಳಿ ರಕ್ತಕಣಗಳನ್ನು ನಾಶಪಡಿಸಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವುದು ತರವಲ್ಲ. ಮದುವೆಗೆ ಮುನ್ನ ಲೈಂಗಿಕ ಸಂಪರ್ಕವು ನೈತಿಕವೂ ಅಲ್ಲ. ಮದುವೆಯ ನಂತರ ಪತಿ -ಪತ್ನಿಯರು ಪರಸ್ಪರ ವಿಶ್ವಾಸದ ಜೀವನ ನಡೆಸುವುದು ಬಹಳ ಮುಖ್ಯ ಎಂದರು.
 
ಜಿಲ್ಲಾ ಏಡ್ಸ್‌ ತಡೆ ಮತ್ತು ನಿಯಂತ್ರಣ ಘಟಕದ ಐಸಿಟಿಸಿ ಮೇಲ್ವಿಚಾರಕ ಮಲ್ಲಯ್ಯ ಮಠಪತಿ ಮಾತನಾಡಿ, ಪ್ರತಿಯೊಬ್ಬರು ನೈತಿಕ ಜೀವನವನ್ನು ನಡೆಸಿದಾಗ ಏಡ್ಸ್ ರೋಗದಿಂದ ದೂರವಿರಬಹುದು ಎಂದರು.
 
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸಿದ್ಧಲಿಂಗಪ್ಪ ಮಾತನಾಡಿ, ಎಚ್‌ಐವಿ ಸೋಂಕಿತರು/ಏಡ್ಸ್ ರೋಗಿಗಳನ್ನು ಮಾನವೀಯತೆಯಿಂದ ಕಾಣಬೇಕು. ಅವರನ್ನು ಮುಟ್ಟುವುದರಿಂದ, ಕೈಕುಲುಕುವುದರಿಂದ, ಅವರೊಂದಿಗೆ ಊಟ ಮಾಡುವುದರಿಂದ ಅವರ ಬಟ್ಟೆಗಳನ್ನು ಧರಿಸುವುದರಿಂದ ಸೋಂಕು ಹರಡುವುದಿಲ್ಲ. ಅವರಲ್ಲಿ ತಾರತಮ್ಯ ತೋರಬಾರದು ಎಂದರು.
 
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಶ್ರೀನಿವಾಸ ರಾಯಚೂರುಕರ್‌ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.