ADVERTISEMENT

ಕಪ್ಪದ ವಿಷಯ ಬಿಡಿ, ಬರ ಚರ್ಚಿಸಿ

ಬಿಜೆಪಿ, ಕಾಂಗ್ರೆಸ್‌ಗೆ ವಿಧಾನ ಪರಿಷತ್‌ ಸದಸ್ಯ ಹೊರಟ್ಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 6:16 IST
Last Updated 7 ಮಾರ್ಚ್ 2017, 6:16 IST
ಸಿಂಧನೂರು: ರಾಜ್ಯದ ಬರ ಪರಿಸ್ಥಿತಿ ಮರೆತು ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆ ವಿಚಾರವಾಗಿ ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಪಾದಿಸಿದರು.
 
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 163 ತಾಲ್ಲೂಕುಗಳು ಬರಪೀಡಿತವಾಗಿವೆ. ರಾಜ್ಯ ಸರ್ಕಾರ ಇದುವರೆಗೂ ಬರ ಕಾಮಗಾರಿಗಳ ಆರಂಭಿಸಿಲ್ಲ. ಬಿಜೆಪಿ ಜತೆಗೆ ಸಿ.ಡಿ ಮತ್ತು ಡೈರಿ ವಿವಾದಗಳ ಬಗ್ಗೆ ವಾಗ್ವಾದಕ್ಕಿಳಿದಿದೆ. ಮುಂಬರುವ 15 ದಿನಗಳ ಅಧಿವೇಶನದಲ್ಲಿ ಇದೇ ವಿಷಯಕ್ಕೆ ಸದನದ ಅಮೂಲ್ಯ ಸಮಯ ವ್ಯರ್ಥ ಮಾಡದೆ ಬರಗಾಲ ನಿರ್ವಹ ಣೆಯ ಬಗ್ಗೆ ಗಂಭೀರವಾಗಿ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. 
 
ಕಪ್ಪತಗುಡ್ಡದ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ಕೊಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡಕ್ಕೆ ಒಳಗಾಗಿ ಸಹಿ ಮಾಡಿದ್ದಾರೆ. ರಕ್ಷಿತ ಅರಣ್ಯವನ್ನು ಉಳಿಸಲು ಪ್ರಯತ್ನಿಸಲಿಲ್ಲ.  ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹಿಂದೆ ಸಿದ್ದರಾಮಯ್ಯ ತಮ್ಮ ದಿಟ್ಟ ನಿಲುವು ಪ್ರದರ್ಶಿಸುತ್ತಿದ್ದರು. ಈಗ ಹೈಕಮಾಂಡ್ ಇಕ್ಕಳದಲ್ಲಿ ಸಿಲುಕಿದ್ದಾರೆ ಎಂದು ಹೊರಟ್ಟಿ ವಿಶ್ಲೇಷಿಸಿದರು. 
 
ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ಅಧಿಕಾರವನ್ನು ಜನತೆ ನೋಡಿ ಬೇಸತ್ತಿದ್ದಾರೆ.ಮತ್ತೊಮ್ಮೆ ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಮುಂದಿನ ಬಾರಿಗೆ ಜೆಡಿಎಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 
 
ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಜೆಡಿಎಸ್ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ರಾಜಣ್ಣ ಕೊರವಿ, ತಾಲ್ಲೂಕು ಘಟಕ ಅಧ್ಯಕ್ಷ ಎಂ.ಲಿಂಗಪ್ಪ, ಮುಖಂಡರಾದ ಜಿ.ಸತ್ಯನಾರಾಯಣ, ಬಸವರಾಜ ನಾಡಗೌಡ ಇದ್ದರು.
 
* ಕಾಂಗ್ರೆಸ್ ಸರ್ಕಾರ 40 ವರ್ಷ ಮಾಡಿದ ಭ್ರಷ್ಟಾಚಾರವನ್ನು ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಐದೇ ವರ್ಷದಲ್ಲಿ ಮಾಡಿ ಇತಿಹಾಸ ನಿರ್ಮಿಸಿದೆ. ಇವು ರಾಜ್ಯದ ಹಿತ ಕಡೆಗಣಿಸಿವೆ
ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.