ADVERTISEMENT

ಕೈಕೊಟ್ಟ ಮುಂಗಾರು: ಕಂಗಾಲಾದ ರೈತ

ತೇವಾಂಶ ಕೊರತೆಯಿಂದ ಮೊಳಕೆ ಒಡೆಯದ ಬೀಜ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:04 IST
Last Updated 29 ಆಗಸ್ಟ್ 2015, 7:04 IST

ಕವಿತಾಳ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಅನೇಕ ರೈತರು ಭೂಮಿಯ ತೇವಾಂಶ ಕೊರತೆಯಿಂದ ನಾಟಿಯಾಗಿರುವ ಬೆಳೆ ತೆಗೆದು ಜಮೀನನ್ನು ಹದಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕವಿತಾಳ ಹೋಬಳಿ ವ್ಯಾಪ್ತಿಯ 20 ಹಳ್ಳಿಗಳ ಮಳೆ ಆಧಾರಿತ ಅಂದಾಜು 43823 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಅಂದಾಜು 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಆಗಬಹುದು ಎಂದುಕೊಂಡ ರೈತರು ಸಜ್ಜೆ ಮತ್ತು ಅತಿ ಹೆಚ್ಚಿನ ಪ್ರಮಾಣದ ತೊಗರಿ ಬೆಳೆಯಲು ಇಲ್ಲಿನ ಕೃಷಿ ಕೇಂದ್ರದಲ್ಲಿ ಬೀಜ ಖರೀದಿಸಿದ್ದಾರೆ.

ಕರ್ನಾಟಕ ಬೀಜ ನಿಗಮ, ಕೃಷಿ ವಿಜ್ಞಾನ ಕೇಂದ್ರ ಮತ್ತು ಖಾಸಗಿ ಅಂಗಡಿಗಳ ಖರೀದಿ ಹೊರತುಪಡಿಸಿ ಇಲ್ಲಿನ ಕೃಷಿ ಕೇಂದ್ರದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ 74.80 ಕ್ವಿಂಟಲ್‌ ತೊಗರಿ ಮತ್ತು 2.26 ಕ್ವಿಂಟಲ್‌ ಸಜ್ಜೆ ಬೀಜವನ್ನು ರೈತರು ಖರೀದಿಸಿ ಇಟ್ಟುಕೊಂಡಿದ್ದಾರೆ.
 
ಮುಂಗಾರು ಮಳೆ ನಂಬಿಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಭೂಮಿಯ ತೇವಾಂಶ ಕೊರತೆಯಿಂದ ಬೀಜ ಮೊಳಕೆ ಒಡೆದಿಲ್ಲ. ಈಗ ಭೂಮಿಯನ್ನು  ಹದಗೊಳಿಸುವ ಕೆಲಸಕ್ಕೆ ಕೈಹಾಕಿದ್ದೇವೆ ಎಂದು ತೊಪ್ಪಲದೊಡ್ಡಿ ಗ್ರಾಮದ ರೈತ ವೀರಭದ್ರಪ್ಪ ಹೇಳುತ್ತಾರೆ.

ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗಳಾಗಿ ನೆವಣಿ, ಔಡಲ ಮತ್ತು ಹುಚ್ಚೆಳ್ಳು ಬೆಳೆಯಲು ಕೃಷಿ ಇಲಾಖೆ ಪ್ರೇರಣೆ ನೀಡಿದ್ದರೂ ರೈತರು ಆಸಕ್ತಿ ತೋರುತ್ತಿಲ್ಲ. ತೊಗರಿ ಇನ್ನಿತರ ವಾಣಿಜ್ಯ ಬೆಳೆಗಳ ಬಗ್ಗೆ ರೈತರ ಆಸಕ್ತಿ ಹೊಂದಿದ್ದು, ಮಳೆ ಅಭಾವದಿಂದ ತೊಂದರೆಯಾಗಿದೆ.

ಹಿಂಗಾರು ಬಿತ್ತನೆ ಮಾಡುವ ರೈತರು ಜಮೀನಿನಲ್ಲಿ 10– 10 ಮೀಟರ್‌ ಅಳತೆಯ ಮಡಿ ನಿರ್ಮಾಣ ಮಾಡಿಕೊಂಡು ನೀರಿನ ಸಂರಕ್ಷಣೆಗೆ ಮುಂದಾಗಬೇಕು. ಇದು ಭೂಮಿಯ ತೇವಾಂಶ ಕಾಪಾಡುತ್ತದೆ. ಹಿಂಗಾರು ಅವಧಿಗೆ ಕಡಲೆ ಮತ್ತು ಜೋಳ ಬಿತ್ತನೆಗೆ ಹೆಚ್ಚಿನ ರೈತರು ಆಸಕ್ತಿ ತೋರುತ್ತಿದ್ದು ಅಗತ್ಯ ಬೀಜ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿ ಎಸ್‌.ಎಸ್‌. ಕಲ್ಲೊಳ್ಳಿ ತಿಳಿಸಿದ್ದಾರೆ.
***
ಮುಂಗಾರು ಮಳೆ ವಿಫಲವಾಗಿದೆ. ನಿರೀಕ್ಷೆಯಂತೆ ಮಳೆಯಾದರೆ ಹಿಂಗಾರು ಬೆಳೆ ಬೆಳೆಯಬಹುದು. ಬೀಜ ದಾಸ್ತಾನು ಮಾಡಲು ಕ್ರಮಕೈಗೊಳ್ಳಲಾಗಿದೆ.
-ಎಸ್‌.ಎಸ್‌.ಕಲ್ಲೊಳ್ಳಿ, 
ಕೃಷಿ ಸಹಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.