ADVERTISEMENT

ಕೋರ್ಟ್ ಮೊರೆ ಹೋಗಲು ತೀರ್ಮಾನ

ಲಿಂಗಸುಗೂರು: ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ತಪ್ಪು ಮಾಹಿತಿ–ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:00 IST
Last Updated 26 ಏಪ್ರಿಲ್ 2018, 13:00 IST

ಲಿಂಗಸುಗೂರು: ‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕೇಂದ್ರದ ಅಧಿಸೂಚನೆ ಇಲ್ಲದೆ ವಡ್ಡರ್‌ (ಭೋವಿ) ಜಾತಿ ಪ್ರಮಾಣ ಪತ್ರ ಪಡೆದು ಅಕ್ರಮ ಆಸ್ತಿ ರಕ್ಷಣೆಗೆ ತಪ್ಪು ಮಾಹಿತಿ ನೀಡಿ ವಂಚನೆ ಮಾಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರುತ್ತೇವೆ’ ಎಂದು ಸಿಪಿಐ (ಎಂಎಲ್‌ ರೆಡ್ಡ್‌ ಸ್ಟಾರ್‌) ಅಭ್ಯರ್ಥಿ  ಆರ್‌. ಮಾನಸಯ್ಯ ಮತ್ತು ಪಕ್ಷೇತರ ಅಭ್ಯರ್ಥಿ ಬಾಲಸ್ವಾಮಿ ಕೊಡ್ಲಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ ಮುಂಭಾಗದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ 2013ರ ಚುನಾವಣೆಯಲ್ಲಿ ಐವರು ಅವಲಂಬಿತರಿದ್ದಾರೆ . 2018ರಲ್ಲಿ ಇಬ್ಬರು  ಅವಲಂಬಿತರಿದ್ದಾರೆ ಎಂದು ಅಫಿಡವಿಟ್‌ದಲ್ಲಿ ತಪ್ಪು ಮಾಹಿತಿ ನೀಡಿ ಆಯೋಗಕ್ಕೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

‘ವಜ್ಜಲ ಕುಟುಂಬದಲ್ಲಿ ಇಬ್ಬರೆ ಅವಲಂಬಿತರು ಇರಬೇಕಾದರೆ, ಮತದಾರ ಪಟ್ಟಿಯಲ್ಲಿ ಅವರ ಕುಟುಂಬದಲ್ಲಿ 16 ಮತದಾರರು ಇದ್ದಾರೆ. ಅವರ ಪುತ್ರಿ ಪೂಜಾ ಎಂಬುವರ ಪ್ರತ್ಯೇಕ ಕುಟುಂಬದಲ್ಲಿ 19  ಮಂದಿ ಅಕ್ರಮ ಮತದಾರರ ಸೇರ್ಪಡೆ ಮಾಡಲಾಗಿದೆ. ಹಾಗಾದರೆ ಇವರೆಲ್ಲ ಯಾರು? ಎಂಬುದು ಪ್ರಶ್ನೆಯಾಗಿದೆ. ಅಕ್ರಮ ಆಸ್ತಿ ರಕ್ಷಣೆಗೆ ತಮ್ಮ ಅಡ್ಡ ಹೆಸರು ಬದಲಾಯಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆ’ ಎಂದು ದೂರಿದರು.

ADVERTISEMENT

‘ಒಂದು ಕಡೆ ಶ್ರೀಮಂತರಾಯ ಮಾನಪ್ಪ ಧೋತ್ರೆ ಎಂದು ಸುಳ್ಳು ದಾಖಲೆ, ಇನ್ನೊಂದಡೆ ಈಶ್ವರ ಮಾನಪ್ಪ ವಜ್ಜಲ ಎಂದು ದಾಖಲೆ ಸೃಷ್ಠಿಸಲಾಗಿದೆ. ಬಿಜೆಪಿ ಡೆಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದೇವರಾಜ ನಾಗಪ್ಪ ಧೋತ್ರೆ ಲಿಂಗಸುಗೂರು ಮನೆ ನಂಬರ ಹೆಸರಿನಲ್ಲಿ ಗೆಜ್ಜಲಗಟ್ಟಾ ಗ್ರಾಮದ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿರುವ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಹೈಕೋರ್ಟ್‌ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಟಿ.ಎ. ಶರವಣ ಅವರು, ಮಾನಪ್ಪ ವಜ್ಜಲ ಮತ್ತು ಶಿವರಾಜ ಪಾಟೀಲರ ನಾಮಪತ್ರ ಪರಿಶೀಲನೆ ತಡೆಯುವುದು ಮತ್ತು ಸಭಾಪತಿ ರಾಜೀನಾಮೆ ಸ್ವೀಕಾರ ಆದೇಶ ರದ್ದುಪಡಿಸುವ ರಿಟ್‌ ಅರ್ಜಿ ನೊಂದಾಯಿಸಿಕೊಂಡು ನೋಟಿಸ್‌ ಜಾರಿ ಮಾಡಿರುವುದು ಸೇರಿದಂತೆ ಎಲ್ಲ ಆರೋಪಗಳ ಕುರಿತು ಚುನಾವಣಾಧಿಕಾರಿಗೆ ದಾಖಲೆ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರ ಮತ್ತು ಚುನಾವಣಾ ಆಯೋಗದ ಆಶಯಗಳನ್ನು ಬುಡಮೇಲು ಮಾಡಿದ ಅಧಿಕೃತ ದಾಖಲೆಗಳನ್ನು ಸಲ್ಲಿಸಿದರೂ ಕೂಡ ನ್ಯಾಯ ಸಮ್ಮತ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಚುನಾವಣಾಧಿಕಾರಿ, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ವಿರುದ್ಧ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ದಾನಪ್ಪ ಮಸ್ಕಿ, ಅಜಿಝ ಜಹಗೀರದಾರ, ತಿಪ್ಪರಾಜ, ಶೇಖರಯ್ಯ ಗೆಜ್ಜಲಗಟ್ಟಾ, ಚಿನ್ನಪ್ಪ ಕೊಟ್ರಿಕಿ ಇದ್ದರು.

12 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ಬಿಜೆಪಿಯ ದೇವರಾಜ ನಾಗಪ್ಪ ಧೋತ್ರೆ ಮತ್ತು ಜೆಡಿಎಸ್‌ನ  ಗಂಗಾ ಶಿದ್ದು ಬಂಡಿ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ತಿರಸ್ಕೃತಗೊಳಿಸಲಾಗಿದೆ’ ಎಂದು ಚುನಾವಣಾಧಿಕಾರಿ ರೇಣುಕಾ ಪ್ರಸಾದ ತಿಳಿಸಿದರು.

ಮಾನಪ್ಪ ಡಿ. ವಜ್ಜಲ (ಬಿಜೆಪಿ), ಡಿ.ಎಸ್‌. ಹೂಲಗೇರಿ (ಕಾಂಗ್ರೆಸ್) ಶಿದ್ದು ಬಂಡಿ (ಜೆಡಿಎಸ್‌) ಆರ್‌. ಮಾನಸಯ್ಯ (ಸಿಪಿಐ ಎಂಎಲ್‌ ರೆಡ್‌ ಸ್ಟಾರ್‌), ಹನುಮಂತ ಮುನಿಯಪ್ಪ (ಭಾರತೀಯ ಹೊಸ ಕಾಂಗ್ರೆಸ್‌) ಮತ್ತು ಹೊನ್ನಪ್ಪ ಮಲ್ಲಪ್ಪ (ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ), ಪಕ್ಷೇತರರಾದ ಶಿವಪುತ್ರ ಗಾಣದಾಳ, ಶ್ರೀನಿವಾಸ ಹನುಮಂತಪ್ಪ, ಎ. ಬಾಲಸ್ವಾಮಿ ಕೊಡ್ಲಿ, ನಾಗರಾಜ ಹನುಮಂತಪ್ಪ, ಕಿರಿಲಿಂಗಪ್ಪ ಕವಿತಾಳ, ಸೋಮಲಿಂಗಪ್ಪ ದುಬಾರಿ ಅವರ ನಾಮಪತ್ರಗಳು ಸ್ವೀಕೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.