ADVERTISEMENT

ಜಕ್ಕಲದಿನ್ನಿ ರೈತರಿಗೆ ಯೋಜನೆಗಳನ್ನು ತಲುಪಿಸಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 5:53 IST
Last Updated 21 ಜುಲೈ 2017, 5:53 IST

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕು ಜಕ್ಕಲದಿನ್ನಿ ಗ್ರಾಮದ ರೈತರಿಗೆ ವಿವಿಧ ಇಲಾಖೆಗಳಿಂದ ಸರ್ಕಾರಿ ಯೋಜನೆಗಳನ್ನು ತಲುಪಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಜಲನಿರ್ಮಲ ಸಭಾಂಗಣದಲ್ಲಿ ಗುರುವಾರ ನಡೆದ ಜಕ್ಕಲದಿನ್ನಿ ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಕೃಷಿ ಬೆಲೆ ಆಯೋಗದ ಪ್ರಾಯೋಗಿಕ ಕಾರ್ಯಯೋಜನೆಯಡಿ ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿಗಾಗಿ ಈ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳ ಎಂಟು ಗ್ರಾಮಗಳಲ್ಲಿ ಯೋಜನೆ ಜಾರಿಯಲ್ಲಿದೆ. ರೈತರ ಸದ್ಯದ ಆರ್ಥಿಕ ಸ್ಥಿತಿ ಹಾಗೂ ಸರ್ಕಾರಿ ಯೋಜನೆಗಳನ್ನು ಪಡೆದುಕೊಂಡು ಬದಲಾಗುವ ಸ್ಥಿತಿಗತಿಗಳನ್ನು ಅವಲೋಕಿಸಲಾಗುತ್ತದೆ. ಈ ಪ್ರಾಯೋಗಿಕ ಯೋಜನೆ ಆಧರಿಸಿ 2018ನೇ ಸಾಲಿನ ಬಜೆಟ್‌ನೊಳಗಾಗಿ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಆಯೋಗದಿಂದ ಒಂದು ನೀಲನಕ್ಷೆ ಒದಗಿಸಲಾಗುವುದು ಎಂದು ಹೇಳಿದರು.

ADVERTISEMENT

ಕೃಷಿ ಇಲಾಖೆ, ನೀರಾವರಿ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಜಾರಿಯಲ್ಲಿರುವ ಯೋಜನೆಗಳ ಅನುಕೂಲವನ್ನು ಜಕ್ಕಲದಿನ್ನಿಯಲ್ಲಿ ಆಯ್ಕೆ ಮಾಡಿರುವ 25 ರೈತರಿಗೆ ಒದಗಿಸಬೇಕು. ರೈತರ ಆಸಕ್ತಿ ಹಾಗೂ ಅವರ ಬೇಡಿಕೆಯನ್ನು ಪರಿಶೀಲಿಸಿ ಇಲಾಖೆಗಳಿಂದ ನೆರವು ಕೋರಲಾಗುವುದು. ತ್ವರಿತವಾಗಿ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಜಕ್ಕಲದಿನ್ನಿ ಗ್ರಾಮಕ್ಕೆ ಶೀಘ್ರ ಭೇಟಿ ನೀಡಿ ಇಲಾಖೆಯ ಯೋಜನೆಗಳನ್ನು ರೈತರಿಗೆ ವಿವರಿಸಬೇಕು. ರೈತರ ಆಸಕ್ತಿಯನ್ನು ಗಮನಿಸಿ ಸ್ಪಂದಿಸುವ ಕೆಲಸವಾಗಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಅಗತ್ಯ ಬೆಂಬಲ ಒದಗಿಸಲಾಗುವುದು.

ರೈತರು ತಮ್ಮ ಆದಾಯ ದ್ವಿಗುಣ ಮಾಡಿಕೊಳ್ಳುವುದಕ್ಕೆ ಇಲಾಖೆಗಳು ಬೆಂಬಲವಾಗಿ ನಿಂತುಕೊಳ್ಳಬೇಕು. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದೆಲ್ಲೆಡೆ ಇದೊಂದು ಮಾದರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌, ಕೃಷಿ ವಿಜ್ಞಾನಿ ಡಾ.ರವಿ ಇದ್ದರು.

ನಿಯಮಗಳ ಅಡ್ಡಿ
ಇಲಾಖೆಯಲ್ಲಿ ಚಾಲ್ತಿ ಇರುವ ಸರ್ಕಾರದ ಯೋಜನೆಗಳನ್ನು ಒಂದೇ ಗ್ರಾಮದ 25 ರೈತರಿಗೆ ಒದಗಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂಬುದನ್ನು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪೇಚಾಡಿದರು.

ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಅಯ್ಕೆ ನಡೆಯುತ್ತದೆ. ಜಕ್ಕಲದಿನ್ನಿಗೆ ನೇರವಾಗಿ ಯೋಜನೆ ಒದಗಿಸಲು ಸರ್ಕಾರದಿಂದ ವಿಶೇಷ ಅನುಮತಿ ಕೊಡಿಸಬೇಕು ಎಂದು ಕೋರಿದರು. ಇಲಾಖೆಯಿಂದ ಪತ್ರ ಕಳುಹಿಸಿದರೆ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗುವುದು ಎಂದು ಪ್ರಕಾಶ್‌ ಕಮ್ಮರಡಿ ಅವರು ಹೇಳಿದರು.

ಹಸು ಖರೀದಿಸಿ
ಹಸುಗಳು ಹಾಗೂ ಮೇಕೆಗಳನ್ನು ಖರೀದಿಸುವುದಕ್ಕೆ ನಬಾರ್ಡ್‌ ನೆರವು ಒದಗಿಸುತ್ತದೆ. ನಬಾರ್ಡ್‌ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಾಯಧನ ಒಗಿಸುತ್ತದೆ. ಜಕ್ಕಲದಿನ್ನಿಯ ಆಸಕ್ತ ರೈತರು ಶೇ 10 ರಷ್ಟು ಮೊತ್ತವನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು.

ರೈತರನ್ನು ಋಣಮುಕ್ತಗೊಳಿಸಲು ಲೀಡ್‌ ಬ್ಯಾಂಕ್‌ ಪಾತ್ರ ತುಂಬಾ ಮಹತ್ವದ್ದಾಗಿದೆ. ರೈತರಿಗೆ ಹೊರೆಯಾಗದಂತೆ ಸಾಲ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಎಂದು ಕಮ್ಮರಡಿ ಹೇಳಿದರು.

ಗೊಂದಲ ನಿವಾರಿಸಿ
ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆಯಡಿ ಮೆಣಸಿನಕಾಯಿ ಸೇರ್ಪಡೆ ಮಾಡುವ ವಿಷಯ ನಬಾರ್ಡ್‌ನಲ್ಲೆ ಗೊಂದಲ ಇದೆ. ಹಸಿಮೆಣಸಿನಕಾಯಿಗೆ ಮಾತ್ರ ವಿಮೆ ಇದ್ದರೆ ಜಕ್ಕಲದಿನ್ನಿ ರೈತರಿಗೆ ಏಕೆ ಈ ಸೌಲಭ್ಯ ಒದಗಿಸಿಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟ ಉತ್ತರ ಒಗಿಸಬೇಕು.

ಜಕ್ಕಲದಿನ್ನಿಯಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದರೂ ಪಟ್ಟಿಯಲ್ಲಿ ಏಕೆ ಇಲ್ಲ. ತಾಂತ್ರಿಕ ಅಂಶವನ್ನು ಸರಿಪಡಿಸಿ ವಿಮೆ ಸೌಲಭ್ಯ ಕೊಡಬೇಕು ಎಂದು ಪ್ರಕಾಶ್‌ ಕಮ್ಮರಡಿ ತಿಳಿಸಿದರು. 

* * 

ರೈತರ ಆದಾಯ ದ್ವಿಗುಣ ಆಗುವುದಕ್ಕೆ ಪೂರಕ ಅನುಕೂಲ ಕಲ್ಪಿಸುವ ಇಲಾಖೆಗಳು ಸ್ವಯಂ ಸ್ಪಂದಿಸಿ ಕೆಲಸ ಮಾಡಿಕೊಡಬೇಕು. ಜಕ್ಕಲದಿನ್ನಿಗೆ ಹೋಗಿ ರೈತರಿಗೆ ಸಮಗ್ರ ಮಾಹಿತಿ ಕೊಡಿ.
ಡಾ.ಬಗಾದಿ ಗೌತಮ, ಜಿಲ್ಲಾಧಿಕಾರಿ
‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.