ADVERTISEMENT

ಬೆಳೆನಷ್ಟ ಪರಿಹಾರ ನೀಡುವಲ್ಲಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:13 IST
Last Updated 17 ಮೇ 2017, 6:13 IST

ಲಿಂಗಸುಗೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಂತೆಕೆಲ್ಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರ ಬ್ಯಾಂಕ್‌ ಖಾತೆಗಳಿಗೆ ಬೆಳೆನಷ್ಟ ಪರಿಹಾರ ಹಾಕುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತಾರತಮ್ಯ  ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಮಂಗಳವಾರ ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿ, ‘ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ವೈಫಲ್ಯತೆಯಿಂದ ರೈತರಿಗೆ ಅಪಾರ  ನಷ್ಟ ಆಗಿದೆ. ಈ ಕುರಿತು ಹಲವು ಬಾರಿ ದಾಖಲೆ ಸಮೇತ ಮಸ್ಕಿ ಮತ್ತು ಲಿಂಗಸುಗೂರು ತಹಶೀಲ್ದಾರ್‌ಗೆ  ಮನವಿ ಸಲ್ಲಿಸಿದರೂ ಬೆಳೆನಷ್ಟ ಪರಿಹಾರ ನೀಡಿಲ್ಲ’ ಎಂದು ರೈತರು ದೂರಿದರು.

‘ಸಂತೆಕೆಲ್ಲೂರು, ಕುಣಿಕೆಲ್ಲೂರು, ಮಟ್ಟೂರು, ಕಾರಲಕುಂಟಿ, ಬಸ್ಸಾಪುರ, ಅಂಕುಶದೊಡ್ಡಿ ಸೇರಿದಂತೆ ಬಹುತೇಕ ರೈತರಿಗೆ ಇಂದಿಗೂ ಬೆಳೆನಷ್ಟ ಪರಿಹಾರ ಜಮಾ ಮಾಡಿಲ್ಲ. ಬ್ಯಾಂಕ್‌ ಖಾತೆ ನಕಲು ಪ್ರತಿ, ಪಹಣಿ ದಾಖಲೆ 3 ಬಾರಿ ನೀಡಿದ್ದೇವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಬಳಿಗೆ ತೆರಳಿದರೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಈ ಗ್ರಾಮಗಳ ಕೆಲ ರೈತರಿಗೆ ಮಾತ್ರ ಪರಿಹಾರ ಹಣ ಜಮಾ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೀಡುವ ಬೆಳೆನಷ್ಟ ಪರಿಹಾರ ಹಣವನ್ನು ಪ್ರಭಾವಿಗಳ ಖಾತೆಗೆ ಜಮಾ ಆಗಿದೆ.  ರೈತರ ಗೋಳು ಕೇಳುವವರು ಇಲ್ಲದಾಗಿದೆ. ಕಾರಣ ಈ ಕುರಿತು ಪರಿಶೀಲಿಸಿ ನ್ಯಾಯ ಒದಗಿಸುವಂತೆ ಕೋರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಹೆಸರೂರು, ರೈತರಾದ ಮಾನಪ್ಪ ಮಟ್ಟೂರು, ಶರಣಗೌಡ ಕುಪ್ಪಿಗುಡ್ಡ, ಉಮಾಪತಿ ಮಟ್ಟೂರು ತಾಂಡಾ, ಗ್ಯಾನಪ್ಪ ಅಂಕುಶದೊಡ್ಡಿ, ಹೊನ್ನಳೆಪ್ಪ ಮಿಟ್ಟಿಕೆಲ್ಲೂರು, ಹೊಳೆ ಯಪ್ಪ, ದ್ಯಾಮಯ್ಯ ಗುತ್ತೆದಾರ, ಹನುಮಂತ ನಾಯಕ, ಮಲ್ಲಪ್ಪ, ಸಣ್ಣಅಲ್ಲಿಸಾಬ, ಶರಣಯ್ಯ ಗುರು ವಿನಮಠ, ಶಿವಪ್ಪ ಹರಿಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.