ADVERTISEMENT

‘ರೈತ ಪರ ಕಾಳಜಿ ಇಲ್ಲದ ಶಾಸಕ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:41 IST
Last Updated 2 ಜನವರಿ 2017, 9:41 IST

ಜಾಲಹಳ್ಳಿ: ‘ದೇವದುರ್ಗ ತಾಲ್ಲೂಕಿನ ಶಾಸಕ ಕೆ.ಶಿವನಗೌಡ ನಾಯಕ ಅವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ ಭೀಮಣ್ಣ ನಾಯಕ ಗುಮೇದಾರ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಸ್ಥಗಿತಗೊಳಿಸುವ ವಿಷಯಕ್ಕೆ ಸಂಬಂಧಿಸದಂತೆ ಶಾಸಕರು ಜ.3ರಂದು ತಿಂಥಣಿ ಬ್ರೀಜ್‌ ನಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸುವುದಾಗಿ ತಮ್ಮನ್ನು ಭೇಟಿಯಾಗಲು ಬಂದ ನೀರಾವರಿ ಇಲಾಖೆಯ ಎಂಜನಿಯರ್ ಎದುರು ಹೇಳುವುದು ಎಷ್ಟು ಸರಿ.

ಅದರ ಬದಲು, ತಾವೇ ಕೃಷ್ಣ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿಯ ಸದಸ್ಯರಾಗಿ ಸಭೆಯಲ್ಲಿ ವಾರಬಂದಿ ಮಾಡಲು ಒಪ್ಪಿಕೊಂಡು, ಈಗ ರೈತರಿಗೆ ತೊಂದರೆ ಉಂಟಾಗಿದೆ ಕಾಲುವೆಗೆ ನಿರಂತರವಾಗಿ ನೀರು ಹರಿಸಬೇಕೆಂದು ಬೂಟಾಟಿಕೆಯ ಹೇಳಿಕೆ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 

ರೈತರ ಬೆಳೆ ಯಾವ ಸಂದರ್ಭದಲ್ಲಿ ಬರುತ್ತೆ ಎನ್ನುವ ಕನಿಷ್ಟ ಜ್ಞಾನವಿಲ್ಲದ ಇಂತಹ ಜನಪ್ರತಿನಿಧಿಗಳು ಇರುವುದರಿಂದ ರೈತರ ಸಮಸ್ಯೆಗಳು ದಿನೆ ದಿನೆ ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ಕಳೆದ ಎರಡು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಬೆಳೆಯದೇ ಬರಗಾಲದಿಂದ ತೊಂದರೆ ಅನುಭವಿಸಿರುವ ರೈತರು ಇರುವ ನೀರಿನಲ್ಲಿಯೇ ಲಘು ಬೆಳೆಗಳನ್ನು ಬೆಳೆದು ತಮ್ಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರೈತರನ್ನು ದಾರಿ ತಪ್ಪಿಸುವ ಉದ್ದೇಶದಿಂದ ತಿಂಥಣಿ ಬ್ರೀಜ್‌ನಲ್ಲಿ ರಸ್ತೆ ತಡೆ ನಡೆಸುವುದಾಗಿ ಹೇಳುತ್ತಿದ್ದಾರೆ. ರಾಜಕೀಯ ಉದ್ದೇಶದಿಂದ ಮಾತನಾಡುವುದನ್ನು ಬಿಟ್ಟು ಕಾಲುವೆಗಳಿಗೆ ನಿರಂತರ ನೀರು ಹರಿಸಬೇಕೆಂದು ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ಬದಲು ತಮ್ಮಲ್ಲಿರುವ ಅಧಿಕಾರ ಬಳಸಿಕೊಂಡು ನೀರು ಹರಿಸುವ ಕೆಲಸ ಮಾಡಬೇಕು.

ರೈತರ ಬಗ್ಗೆ ಕಾಳಜಿ ಇದ್ದರೆ ರಸ್ತೆ ತಡೆ ನಡೆಸಲಿ ಎಂದು ಸವಾಲು ಹಾಕಿದರು.ರಂಗಣ್ಣ ಕೋಲ್ಕಾರ್‌, ಹುಸೇನಪ್ಪ ಗುತ್ತಿಗೆದಾರ, ಶ್ರೀ ನಿವಾಸ, ದುರಗಪ್ಪ ನಾಯಕ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.