ADVERTISEMENT

ವಿ.ವಿಗಳಲ್ಲಿ ಪದವಿ ಮಾರಾಟ ಜಾಲ

ಎಸ್‌ಎಫ್‌ಐ ಜಿಲ್ಲಾ ಸಮ್ಮೇಳನದಲ್ಲಿ ಗುರುರಾಜ ದೇಸಾಯಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:09 IST
Last Updated 14 ಫೆಬ್ರುವರಿ 2017, 9:09 IST
ಲಿಂಗಸುಗೂರಿನಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಎಫ್‌ಐ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡಿದರು
ಲಿಂಗಸುಗೂರಿನಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಎಫ್‌ಐ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡಿದರು   
ಲಿಂಗಸುಗೂರು: ರಾಜ್ಯ ಸೇರಿದಂತೆ ದೇಶದ ಪ್ರತಿಯೊಂದು ವಿಶ್ವ ವಿದ್ಯಾಲಯಗಳಲ್ಲಿ ನಕಲಿ ಅಂಕಪಟ್ಟಿ ಹಾವಳಿ ನಿಯಂತ್ರಣ ಮೀರಿ ಬೆಳೆದಿದೆ. ಪಿಎಚ್‌.ಡಿ ಸೇರಿದಂತೆ ಪದವಿಗಳನ್ನು ಹಣಕ್ಕಾಗಿ ಮಾರಾಟ ಮಾಡುವ ಜಾಲ ಹುಟ್ಟಿಕೊಂಡಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಕಳವಳ ವ್ಯಕ್ತಪಡಿಸಿದರು.
 
ಸೋಮವಾರ ಎಸ್‌ಎಫ್‌ಐ 2ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ಕಾಲೇಜುಗಳಲ್ಲಿ ಶೈಕ್ಷಣಿಕ ಚಿಂತನೆಗಳಿಗಿಂತ ಬುರ್ಖಾ– ಕೇಸರಿ ಶಾಲುಗಳ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ಶೈಕ್ಷಣಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮಕೈಗೊಂಡು ಉದ್ಯೋಗಾವಕಾಶ ಕಲ್ಪಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
 
ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾರ್ವಜನಿಕರಿಗಿಂತ ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚು ಲಾಭವಾಗಿದೆ. ಸಂವಿಧಾನದ ಕಲಂ 371(ಜೆ) ವಿಶೇಷ ಸ್ಥಾನಮಾನದಿಂದ ಈ ಭಾಗದ ಜನತೆಗೆ ಸಿಗಬೇಕಾದ ಶೇ 80ರಷ್ಟು ಮೀಸಲಾತಿ ಕೊಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
 
ತಾಲ್ಲೂಕು ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅಮರೇಶ ವೆಂಕಟಾಪುರ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಶಿಕ್ಷಣ ಶ್ರೀಮಂತರ ಸ್ವತ್ತಾಗಿ ಮಾರ್ಪಟ್ಟಿದೆ. ಸರ್ಕಾರಿ ಶಾಲಾ– ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಮುಂದಾಗಬೇಕು. ಶಾಲಾ, ಕಾಲೇಜು, ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸದೆ ಹೋದಲ್ಲಿ ವಿದ್ಯಾರ್ಥಿಗಳು ಸಂಘಟಿತ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.
 
ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಶಬ್ಬೀರ್‌ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ವೀರಾಪುರ ಮುಖಂಡರಾದ ಶಿವಕುಮಾರ ಮ್ಯಾಗಳಮನಿ, ಚೇತನ ಕಿಲ್ಲೇದ, ಲಿಂಗಣ್ಣ ಮೊಕಾಸಿ, ಸಣ್ಣಯ್ಯ ಪಾತಾಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.