ADVERTISEMENT

‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ ನಾಳೆ

ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:40 IST
Last Updated 16 ಫೆಬ್ರುವರಿ 2017, 6:40 IST
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದಿಂದ ಫೆ. 17ರಿಂದ 19ರವರೆಗೆ ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನವನ್ನು ವಿಶ್ವವಿದ್ಯಾಲಯದ ಆಡಳಿತ ಭವನದ ನೆಲಮಾಳಿಗೆಯಲ್ಲಿ ಆಯೋಜಿಸಲಾಗಿದೆ ಎಂದು ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಭುರಾಜ್‌ ತಿಳಿಸಿದರು.
 
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ವಿದ್ಯಾರ್ಥಿಗಳಿಗೆ, ರೈತರಿಗೆ ಮತ್ತು ನಾಗರಿಕರಿಗೆ ಕೀಟಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯಲಿ ಎಂಬ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ. ಪ್ರದರ್ಶನವು ಬೆಳಿಗ್ಗೆ 9.30ರಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದು ಹೇಳಿದರು.
 
ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವಕ್ಕೂ ಮೊದಲೇ ಕೀಟಗಳು ಇದ್ದವು. ಸುಮಾರು ಒಂದು ಎಕರೆ ಪ್ರದೇಶದಲ್ಲಿ 40 ದಶಲಕ್ಷ ಕೀಟಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಅನೇಕ ಕೀಟಗಳು ರೈತರಿಗೆ ಉಪದ್ರವಕಾರಿಯಾದರೆ, ಕೆಲವು ಉಪಕಾರಿಯಾಗಿವೆ. 30ಕ್ಕೂ ಹೆಚ್ಚು ಕೀಟ ಪ್ರಭೇದಗಳ ಮಾಹಿತಿಯನ್ನು ಪ್ರದರ್ಶನದಲ್ಲಿ ನೀಡಲಾಗುವುದು ಎಂದರು.
 
ಪ್ರದರ್ಶನವು ಆರು ವಿಭಾಗಗಳಲ್ಲಿ (ಥೀಮ್‌) ನಡೆಯಲಿದೆ. ಕೀಟಗಳು ಎಂದರೇನು, ಕೀಟಗಳು ಯಾವುವು, ಕೀಟಗಳ ವೈವಿಧ್ಯ, ಮನುಷ್ಯ ಮತ್ತು ಪ್ರಾಣಿಗಳಿಗೆ ಹಾನಿ ಮಾಡುವ ಕೀಟಗಳು, ಕೀಟಗಳು ಸುಂದರಮುಖ, ಕೃಷಿಯಲ್ಲಿ ಕೀಟಗಳ ಪಾತ್ರ ಮತ್ತು ಕೀಟಗಳ ಮಾದರಿಗಳ ಪ್ರದರ್ಶನ ನಡೆಯಲಿದೆ ಎಂದರು.
 
ಬನ್ನೇರುಘಟ್ಟದ ಚಿಟ್ಟೆಗಳ ಪಾರ್ಕ್‌ನಿಂದ ಕೆಲವು ಕೀಟಗಳನ್ನು ತಂದು ಪ್ರದರ್ಶಿಸಲಾಗುತ್ತಿದೆ. ಕೀಟಗಳ ಛಾಯಾಚಿತ್ರ ಮತ್ತು ವಿಡಿಯೊ ಪ್ರದರ್ಶನ ಕೂಡ ಇರಲಿದೆ. ರೇಷ್ಮೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ. ಜೊತೆಗೆ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕೀಟದ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಉತ್ತಮ ಮಾದರಿಗಳಿಗೆ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
 
ಇಂತಹದೆ ಪ್ರದರ್ಶನವನ್ನು 2000 ಇಸ್ವಿಯಲ್ಲಿ ರಂಗಮಂದಿರದಲ್ಲಿ, 2013ರಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಸಲಾಗಿತ್ತು. ಇದು ಮೂರನೇ ಪ್ರದರ್ಶನವಾಗಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ನಾಗರಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಮೋದ್‌ ಕಟ್ಟಿಮನಿ, ಭೀಮಣ್ಣ, ಸೋಮಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.