ADVERTISEMENT

ಶಿವಾಜಿ ಪ್ರತಿಮೆಗೆ ಅಪಮಾನ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:35 IST
Last Updated 8 ನವೆಂಬರ್ 2017, 9:35 IST

ಮಾನ್ವಿ: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಲಾಗಿದೆಯೆಂದು ಖಂಡಿಸಿ ಛತ್ರಪತಿ ಶಿವಾಜಿ ಯುವ ಸೇನೆ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿ ಕಚೇರಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ‘ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಅ.30 ರಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳು ಹಿಂದೂ ಸಮಾಜದವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ, ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕಿಡಿಗೇಡಿಗಳು ಪುನಃ ಇಂತಹ ಕೃತ್ಯದಲ್ಲಿ ತೊಡಗದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ತಹಶೀಲ್ದಾರ್‌ ಅಮರೇಶ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮಾಜಿ ಶಾಸಕ ಗಂಗಾಧರ ನಾಯಕ, ಮುಖಂಡರಾದ ಎಂ.ಈರಣ್ಣ, ಉಮೇಶ ಸಜ್ಜನ್‌, ವಸಂತ ಕೊಡ್ಲಿ, ಬಸವಗೌಡ ಚೀಕಲಪರ್ವಿ, ಜಗನ್ನಾಥ ಕುಲಕರ್ಣಿ, ಅಯ್ಯಪ್ಪ ನಾಯಕ ಮ್ಯಾಕಲ್, ಸುರೇಶ ನಾಡಗಡ, ಗಿರಿಮಲ್ಲಯ್ಯ, ಶರಣ್‌ ಪಾಟೀಲ್‌,ಗಿರಿ ನಾಯಕ ಪೆರಕಲ್‌, ಗಂಗಾರಾಮ, ಪ್ರಸಾದ ಕೆಇಬಿ, ಶರಣಯ್ಯ ಸ್ವಾಮಿ, ವೀರೇಶ ಕರೇಗುಡ್ಡ, ಮೃತ್ಯುಂಜಯ ಶೆಟ್ಟಿ, ನಾಗರಾಜ ಕಬ್ಬೇರ್‌, ಗೋಪಾಲ ನಾಯಕ, ವಿ.ಜನರ್ಧನ್, ನರಸಪ್ಪ ಜೂಕೂರು, ಸಿದ್ದು ಸಾಹುಕಾರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.