ADVERTISEMENT

ಅಭ್ಯರ್ಥಿಗಳ ಚಟುವಟಿಕೆ ಮೇಲೆ ಕಣ್ಣಿಡಲು ಬಿಎಸ್‌ಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:31 IST
Last Updated 23 ಮಾರ್ಚ್ 2018, 12:31 IST

ರಾಮನಗರ: ಚುನಾವಣಾ ಆಯೋಗ ಈಗಿನಿಂದಲೇ ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಅವರ ಆರ್ಥಿಕ ವಹಿವಾಟಿನ ಮೇಲೆ ನಿಗಾ ವಹಿಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಆಗ್ರಹಿಸಿದರು.

‘ಕನಕಪುರದಲ್ಲಿ ಕಾಂಗ್ರೆಸ್ ಮುಖಂಡರು ಈಗಾಗಲೇ ಪಕ್ಷ ಕುಕ್ಕರ್ ಮೊದಲಾದ ವಸ್ತುಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ. ಇಂತಹ ಹತ್ತು ಹಲವು ಅಕ್ರಮ ನಡೆಯುತ್ತಲೇ ಇದ್ದು, ಚುನಾವಣಾ ಆಯೋಗ ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಇವಿಎಂ ಬಗ್ಗೆ ಅನುಮಾನ: ವಿದ್ಯುನ್ಮಾನ ಮತ ಯಂತ್ರಗಳ ಸಾಚಾತನದ ಬಗ್ಗೆ ದೇಶದ ಉದ್ದಗಲಕ್ಕೂ ಅನುಮಾನಗಳಿವೆ. ಆದಾಗ್ಯೂ ಆಯೋಗ ಅದನ್ನು ಪರಿಹರಿಸುವ ಪ್ರಯತ್ನ ಮಾಡಿಲ್ಲ. ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿಲ್ಲ. ರಾಜ್ಯದಲ್ಲಿ ಈ ಯಂತ್ರಗಳ ಬಳಕೆಗೆ ಮುನ್ನ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಗುಜರಾತ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಅಲ್ಲಿನ ಇವಿಎಂಗಳನ್ನೇ ರಾಜ್ಯದ ಚುನಾವಣೆಗಾಗಿ ತಂದಿರುವುದು ಹಲವು ಅನುಮಾನ ಮೂಡಿಸಿದೆ. ನೆರೆಯ ತಮಿಳುನಾಡು ಚುನಾವಣೆ ಮುಗಿದಿದ್ದು, ಅಲ್ಲಿಂದಲೇ ಈ ಯಂತ್ರಗಳನ್ನು ತರಬಹುದಿತ್ತು ಎಂದು ಅವರು ಹೇಳಿದರು. ಕೇಂದ್ರ ಚುನಾವಣಾ ಆಯೋಗದ ಚುಕ್ಕಾಣಿ ಹಿಡಿದಿರುವವರು ಬಿಜೆಪಿಗೆ ಹತ್ತಿರವಾದವರು ಎಂದೂ ದೂರಿದರು.

ಇವಿಎಂಗಳ ಬಗ್ಗೆ ಎದ್ದಿರುವ ಅನುಮಾನ ಪರಿಹರಿಸುವುದು ಚುನಾವಣಾ ಆಯೋಗದ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನಿಸಿದವರ ವಿರುದ್ಧವೇ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕುವುದು ಸರಿಯಲ್ಲ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಬೂತ್ ರಿಗ್ಗಿಂಗ್ ವಿಚಾರದಲ್ಲೂ ಆಯೋಗ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಅದು ನಿಷ್ಪಕ್ಷಪಾತವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.