ADVERTISEMENT

ಕೆಟ್ಟು ನಿಂತ ಇ–ಟಾಯ್ಲೆಟ್‌ - ಪರದಾಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 9:19 IST
Last Updated 4 ನವೆಂಬರ್ 2017, 9:19 IST

ಕನಕಪುರ: ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ನಿರ್ಮಾಣ ಮಾಡಿರುವ ಇ–ಟಾಯ್ಲೆಟ್‌ ಕೆಟ್ಟು ತಿಂಗಳಾದರೂ ರಿಪೇರಿಯಾಗದೆ ಇರುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಬಸ್‌ ನಿಲ್ದಾಣದ ಪೆಟ್ರೋಲ್‌ ಬಂಕ್‌ ಬಳಿಯಿರುವ ಇ–ಟಾಯ್ಲೆಟ್‌ ಕೆಟ್ಟಿದೆ. ಈ ಭಾಗದಲ್ಲಿ ಜನಸಂದಣಿ ಹೆಚ್ಚಾಗಿದೆ, ವಾಣಿಜ್ಯ ಕೇಂದ್ರವಾಗಿರುವುದರಿಂದ ಇ–ಟಾಯ್ಲೆಟ್‌ ತುಂಬ ಬಳಕೆಯಾಗುತ್ತದೆ. ದುರಸ್ತಿ ಮಾಡದೆ ಸದಾ ಮುಚ್ಚಿರುವುದರಿಂದ ಸಾರ್ವಜನಿಕರು ಮಲಮೂತ್ರ ಮಾಡಲು ಪರದಾಡಬೇಕಿದೆ ಎಂದು ಪ್ರಯಾಣಿಕ ರಮೇಶ್‌ ಹೇಳಿದ್ದಾರೆ.

ಈ ಭಾಗದಲ್ಲಿ ಎಲ್ಲೂ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ನಗರಸಭೆಯು ಅತ್ಯಾಧುನಿಕವಾಗಿ ದಿನದ 24 ಗಂಟೆ ಸೇವೆ ದೊರೆಯುವಂತೆ ಇದನ್ನು ನಿರ್ಮಿಸಿತ್ತು. ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದ ಯಂತ್ರಗಳು ಬರಬರುತ್ತಾ ಸಮಸ್ಯೆಗೆ ಒಳಗಾಗಿ ಬಾಗಿಲು ತೆಗೆದರೆ ಮುಚ್ಚುವುದಿಲ್ಲ, ಮುಚ್ಚಿದರೆ ತೆಗೆಯುವುದಿಲ್ಲ, ಇಲ್ಲವಾದಲ್ಲಿ ಒಳಗೆ ನೀರು ಬರುವುದಿಲ್ಲ ಅಥವಾ ಸುತ್ತಲೂ ನೀರು ಸೋರಿಕೆಯಾಗಿ ಗಲೀಜು ನೀರು ರಸ್ತೆಗೆ ಹರಿದು ಬರುವ ಮೂಲಕ ಸಮಸ್ಯೆಗಳಿಂದ ಕೂಡಿತ್ತು.

ನಿರ್ವಹಣೆ ವಹಿಸಿಕೊಂಡಿರುವ ವ್ಯಕ್ತಿಗಳಿಗೆ ಕರೆ ಮಾಡಿದರೆ ಬಂದು ಸರಿಪಡಿಸುವುದಾಗಿ ಹೇಳಿದ್ದರು. ಆದರೆ, ರಿಪೇರಿ ಮಾಡುವುದಿಲ್ಲ ಎಂದು ದೂರಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆ ನಗರಸಭೆಯವರಿಗೆ ಸೇರಿದ್ದು ಅಲ್ಲಿ ಯಾರಿಗೆ ದೂರು ನೀಡಬೇಕೆಂದು ಸಾರ್ವಜನಿಕರಿಗೆ ತಿಳಿಯುತ್ತಿಲ್ಲ.

ADVERTISEMENT

ದುರಸ್ತಿ ಆಗದ ಕಾರಣ ಜನರು ಚರಂಡಿ, ಮೋರಿಗಳನ್ನು ಶೌಚಕ್ಕೆ ಬಳಸುತ್ತಿದ್ದಾರೆ. ಖಾಲಿ ಸಿಕ್ಕ ಸ್ಥಳಗಳಲ್ಲಿ ಮಲ ಮೂತ್ರ ಮಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಗರಸಭೆ ನಿರ್ಮಿಸಿರುವ ಶೌಚಾಲಯ ಬಳಕೆಯಾಗದೆ ವ್ಯರ್ಥವಾಗಿದೆ.

ಇಲಾಖೆಯ ಉದ್ದೇಶ ಸಾರ್ಥಕವಾಗದೆ ಚರಂಡಿ ಮೋರಿಗಳು ಶೌಚಾಲಯಗಳಾಗಿ ಗಬ್ಬು ನಾರುತ್ತಿವೆ. ಸಂಬಂಧಪಟ್ಟವರು ಶೀಘ್ರವಾಗಿ ರಿಪೇರಿ ಮಾಡಿಸಿ ಸಾರ್ವಜನಿಕ ಬಳಕೆಗೆ ಕೊಡಬೇಕು, ಮುಂದೆ ಇಂತಹಸ ಮಸ್ಯೆ ತಲೆದೋರದಂತೆ ಎಚ್ಚರ ವಹಿಸ ಬೇಕೆಂದು ಜನರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಿರುವ ಇ–ಟಾಯ್ಲೆಟ್‌ ನಲ್ಲಿ , ಒಂದು ರೂಪಾಯಿ ನಾಣ್ಯಹಾಕಿ ಮಲ ಮತ್ತು ಮೂತ್ರ ವಿಸರ್ಜನೆ ಮಾಡಬಹುದು.

ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಮಾಡಿದ್ದು ಅದರ ನಿರ್ವಹಣೆಯನ್ನು ಬೆಂಗಳೂರಿನ ಕಂಪೆನಿಯೊಂದಕ್ಕೆ ನೀಡಲಾಗಿದೆ. ರಿಪೇರಿ ಇದ್ದರೆ ದೂರವಾಣಿ ಕರೆ ಮಾಡುವಂತೆ ತಿಳಿಸಿದ್ದು ಅದಕ್ಕೆ ಸ್ಪಂದಿಸಿಲ್ಲವಾದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಸಭೆ ತಾಂತ್ರಿಕ ವಿಭಾಗದ ಅಧಿಕಾರಿ ವಿಜಯಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.