ADVERTISEMENT

ತ್ಯಾಜ್ಯ ವಿಲೇವಾರಿ: ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:07 IST
Last Updated 4 ಆಗಸ್ಟ್ 2015, 10:07 IST

ರಾಮನಗರ: ಕಣ್ವ ಗ್ರಾಮದಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯ ನೂರಾರು ಟನ್‌ ಕಸವನ್ನು ಅವೈಜ್ಞಾನಿಕವಾಗಿ ಸುರಿಯುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ಯ ಕಾರ್ಯಕರ್ತರು ಕಂದಾಯ ಭವನದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಕಸವನ್ನು ಅವೈಜ್ಞಾನಿಕವಾಗಿ ಹಾಕುತ್ತಿರುವುದರಿಂದ ಗ್ರಾಮದ ಸುತ್ತಮುತ್ತ ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಹಾಗಾಗಿ ಕೂಡಲೇ ಇಲ್ಲಿ ಕಸ ಸುರಿಯುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಂಜುನಾಥ್ ಮಾತನಾಡಿ, ಕಣ್ವ ಮರ್ಹಷಿಗಳ ತಪೋ ಭೂಮಿಯಾದ ಪ್ರಸಿದ್ಧ ಕಣ್ವ ಪ್ರದೇಶವನ್ನು ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳು ಅಪವಿತ್ರ ಗೊಳಿಸುತ್ತಿವೆ. ಅವೈಜ್ಞಾನಿಕವಾಗಿ ನೂರಾರು ಟನ್ ಕಸವನ್ನು ಗ್ರಾಮದಲ್ಲಿ ಸುರಿಯುತ್ತಿದ್ದು, ಸೇವಿಸಲು ಶುದ್ಧ ಗಾಳಿ ಹಾಗೂ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಕಣ್ವ ಜಲಾಶಯವನ್ನು ರಕ್ಷಿಸುವ ಕನಿಷ್ಠ ವಿವೇಚನೆಯೂ ಅಧಿಕಾರಿಗಳಲ್ಲಿ ಇಲ್ಲದಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.

ಸಮಸ್ಯೆ ಹೀಗೆ ಮುಂದುವರೆದರೆ ಕಣ್ವ ಜಲಾಶಯ ಸಂಪೂರ್ಣವಾಗಿ ಮಲಿನಗೊಳ್ಳಲಿದೆ. ಇದು ಜಲಚರಗಳಿಗೆ ಅಪಾಯಕಾರಿ. ಅಲ್ಲದೆ ದನ, ಕರು, ಪ್ರಾಣಿ ಪಕ್ಷಿಗಳ ಬದುಕಿಗೂ ಸಂಚಕಾರ ತರುತ್ತದೆ. ಜಲಾಶಯವನ್ನು ನೋಡುವ ಪ್ರವಾಸಿಗರು ದರ್ವಾಸನೆಯಿಂದ ಬಳಲುತ್ತಿದ್ದಾರೆ. ಅವೈಜ್ಞಾನಿಕ ಕಸ ವಿಲೇವಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಕಿಡಿಕಾರಿದರು.

ಸುತ್ತಮುತ್ತಲಿನ ನೂರಾರು ಹಳ್ಳಿಗಳಿಗೆ ನೀರಿನ ಮೂಲವಾದ ಕಣ್ವ ಜಲಾಶಯ ಮಲಿನಗೊಳ್ಳದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು. ಕೂಡಲೇ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಕರವೇ ಸ್ವಾಭಿಮಾನಿ ಬಣ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನೂ ನೀಡಿದರು. ಕಣ್ವ ಉಳಿಸಿ ಹೋರಾಟ ಸಮಿತಿಯ ಸದಸ್ಯ ಪ್ರದೀಪ್ ಕುಮಾರ್, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಚಂದ್ರು, ಉಸ್ತುವಾರಿ ಬಸವರಾಜು ಹವಲ್ದಾರ್, ಪದಾಧಿಕಾರಿಗಳಾದ ಎಸ್. ಶಿವಕುಮಾರ್, ಚೇತನ್, ಮನು, ಚಂದ್ರೇಗೌಡ, ಮಹೇಶ್, ವಿನೋದ್, ನಾಗರಾಜು ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.