ADVERTISEMENT

‘ನಿವೇಶನ, ಮನೆ ನೀಡದಿದ್ದರೆ ಓಟು ಇಲ್ಲ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:33 IST
Last Updated 23 ಮಾರ್ಚ್ 2018, 12:33 IST
ಮಂಡ್ಯ ತಾಲ್ಲೂಕಿನ ಹಳೆ ಬೂದನೂರು ಗ್ರಾಮದ ಕೆರೆ ಏರಿ ಮೆಲೆ ಗುರುವಾರ ನಡೆದ ಬೂದನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 23 ಹಳ್ಳಿಗಳ ಸ್ವಂತ ನಿವೇಶನ –ಮನೆ ಇಲ್ಲದವರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಮಂಡ್ಯ ತಾಲ್ಲೂಕಿನ ಹಳೆ ಬೂದನೂರು ಗ್ರಾಮದ ಕೆರೆ ಏರಿ ಮೆಲೆ ಗುರುವಾರ ನಡೆದ ಬೂದನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 23 ಹಳ್ಳಿಗಳ ಸ್ವಂತ ನಿವೇಶನ –ಮನೆ ಇಲ್ಲದವರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ   

ಮಂಡ್ಯ: ‘ವಿವಿಧ ಪಕ್ಷಗಳು ಮುಖಂಡರು ಮತಯಾಚನೆ ಮಾಡಲು ಬಂದಾಗ ಸ್ವಂತ ಮನೆ ಅಥವಾ ನಿವೇಶನ ನೀಡದಿದ್ದರೆ ಮತ ಚಲಾವಣೆ ಮಾಡುವುದಿಲ್ಲ ಎಂಬ ಹೇಳಬೇಕು’ ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಂ.ಬಿ.ನಾಗಣ್ಣಗೌಡ ಹೇಳಿದರು.

ಸಮಿತಿ ವತಿಯಿಂದ ತಾಲ್ಲೂಕಿನ ಹಳೆ ಬೂದನೂರು ಗ್ರಾಮದ ಕೆರೆ ಏರಿ ಮೆಲೆ ಗುರುವಾರ ನಡೆದ ಬೂದನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 23 ಹಳ್ಳಿಗಳ ಸ್ವಂತ ನಿವೇಶನ / ಮನೆ ಇಲ್ಲದವರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಸ್ವಂತ ಮನೆ ಹೊಂದುವುದು ಪ್ರಜೆಗಳ ಸಂವಿಧಾನದಿಂದ ನೀಡಿದ ಮೂಲಭೂತ ಹಕ್ಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲರಿಗೂ ಸೂರು ಒದಗಿಸುವಲ್ಲಿ ವಿಫಲವಾಗಿವೆ. ಪ್ರಧಾನಿ ನರೇಂದ್ರಮೋದಿ ದೇಶದ ಜನರಿಗೆ ಸೂರು ಒದಗಿಸುವುದಾಗಿ ಜಾಗತಿಕ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಅವರ ಸರ್ಕಾರ ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಬೆಂಬಲವಾಗಿ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು 2022ಕ್ಕೆ ಎಲ್ಲರಿಗೂ ಸೂರು ನೀಡುತ್ತೇವೆ ಎಂದು ಘೋಷಣೆ ಮಾಡುತ್ತಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದ್ವಿತೀಯ ಅವಶ್ಯಕಗಳನ್ನು ಬಿಟ್ಟು ವಸತಿ ಸಮಸ್ಯೆಯನ್ನು ಪ್ರಮುಖ ಅಜೆಂಡವಾಗಿ ಘೋಷಣೆ ಮಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜನಪರ ಹೋರಾಟಗಾರ ಅಭಿಗೌಡ ಮಾತನಾಡಿ ‘ರಾಜಕೀಯ ನಾಯಕರು ಗ್ರಾಮೀಣ ಪ್ರದೇಶದ ಸ್ವಂತ ಮನೆ ಇಲ್ಲದ ಸಂತ್ರಸ್ತರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸರ್ಕಾರ ನಿವೇಶನ ಹಾಗೂ ಸೂರು ಕಲ್ಪಿಸಿಕೊಳ್ಳಲು ಫಲಾನುಭವಿಗಳಿಗೆ ₹1.5 ಲಕ್ಷ ಸಹಾಯಧನ ನೀಡುವುದೇ ದೊಡ್ಡ ಸಾಧನೆ ಎಂದು ಹೇಳುತ್ತಾರೆ. ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಮನೆ ನಿರ್ಮಾಣ ಮಾಡಿ ಕೊಡಬೇಕು. ಅರ್ಹ ವ್ಯಕ್ತಿಗಳು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಬೇಕು’ ಎಂದು ಒತ್ತಾಯಿಸಿದರು.

ಬೂದನೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ.ಸತೀಶ್, ಗಾಯಕ ಗಾಮನಹಳ್ಳಿ ಸ್ವಾಮಿ, ಬಾಬು, ಮಂಜುನಾಥ್, ಹೊನಗಾನಹಳ್ಳಿ ಮಧು, ಬೂದನೂರು ಸುನೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.