ADVERTISEMENT

ಪ್ರಧಾನಿಯಿಂದ ಕ್ರಾಂತಿಕಾರಿ ನಿರ್ಧಾರ–ಯಡಿಯೂರಪ್ಪ

ಮರಳೆಗವಿ ಮಠದಲ್ಲಿ ರುದ್ರಮುನಿ ಸ್ವಾಮಿಗಳ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 7:50 IST
Last Updated 21 ಜನವರಿ 2017, 7:50 IST
ಕನಕಪುರ ತಾಲ್ಲೂಕಿನ ಮರಳೇಗವಿ ಮಠದಲ್ಲಿ ನಡೆದ ಕಾರ್ಯಕ್ರಮವನ್ನು ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು, ಮುಮ್ಮಡಿ ಶಿವರುದ್ರಮಹಾಸ್ವಾಮಿ, ಮುಮ್ಮಡಿ ನಿರ್ವಾಣಮಹಾಸ್ವಾಮಿ, ಎಂ.ವಿ.ರಾಜಶೇಖರನ್‌, ಪ್ರಭಾಕರ ಕೋರೆ, ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು
ಕನಕಪುರ ತಾಲ್ಲೂಕಿನ ಮರಳೇಗವಿ ಮಠದಲ್ಲಿ ನಡೆದ ಕಾರ್ಯಕ್ರಮವನ್ನು ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು, ಮುಮ್ಮಡಿ ಶಿವರುದ್ರಮಹಾಸ್ವಾಮಿ, ಮುಮ್ಮಡಿ ನಿರ್ವಾಣಮಹಾಸ್ವಾಮಿ, ಎಂ.ವಿ.ರಾಜಶೇಖರನ್‌, ಪ್ರಭಾಕರ ಕೋರೆ, ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು   

ಕನಕಪುರ:  ಪ್ರಧಾನಿ ನರೇಂದ್ರ ಮೋದಿಯವರು ಕೈಗೊಳ್ಳುವ ನಿರ್ಧಾರದಿಂದ ಜಗತ್ತೇ ಅಚ್ಚರಿ ಪಡುವಂತಹ ಕ್ರಾಂತಿ ಈ ದೇಶದಲ್ಲಿ ನಡೆಯಲಿದೆ ಎಂದು ಬಿ.ಜೆ.ಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ತಾಲ್ಲೂಕಿನ ಉಯ್ಯಂಬಹಳ್ಳಿ ಹೋಬಳಿ ಶ್ರೀ ಕ್ಷೇತ್ರ ಮರಳೆಗವಿ ಮಠದಲ್ಲಿ ನಡೆದ ಕಾಲಾಗ್ನಿ ರುದ್ರಮುನಿ ಮಹಾಸ್ವಾಮಿಗಳ 8 ನೇ ವರ್ಷದ ಸಂಸ್ಮರಣೆ ಹಾಗೂ ಮುಮ್ಮಡಿ ಶಿವರುದ್ರಮಹಾಸ್ವಾಮಿಗಳಿಗೆ ಅಭಿವಂದನೆ ಕಾರ್ಯಕ್ರಮದ ಉದ್ಘಾಟನೆ  ನೆರವೇರಿಸಿ ಮಾತನಾಡಿದರು.

ಮೋದಿಯವರು ಕೃಷಿಗೆ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ, ಆದರೆ ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದಿಂದ ರೈತರು ಸಮಸ್ಯೆಗಳಲ್ಲಿ ಸಿಕ್ಕಿದ್ದಾರೆ , ಇಂತಹ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳು ಹಾಗೂ ಮಠ ಮಾನ್ಯಗಳು ರೈತರ ನೆರವಿಗೆ ಧಾವಿಸಿ ಸಮಸ್ಯೆಯಿಂದ ಪಾರು ಮಾಡಬೇಕೆಂದು ಹೇಳಿದರು.

ADVERTISEMENT

ಬರಗಾಲ ಎದುರಿಸಲು ಮತ್ತು ರೈತರ ಸಹಾಯಕ್ಕೆ ಬಿ.ಜೆ.ಪಿ. ಕಾರ್ಯಕ್ರಮ ರೂಪಿಸಿದೆ, ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗು ರಾಜ್ಯಸಭಾ ಸದಸ್ಯರ ಅನುದಾನ  ರೈತರ ಸಮಸ್ಯೆ ನಿವಾರಣೆಗೆ ಹಾಗೂ ರೈತರ ಸ್ಪಂದನೆಗೆ ಬಳಸಲಾಗುವುದೆಂದರು.

ಮರಳೇಗವಿ ಮಠದ ಈ ತಪೋಭೂಮಿಯಲ್ಲಿ ಯಡಿಯೂರು ಸಿದ್ದಲಿಂಗೇಶ್ವರರು ತಪಸ್ಸು ಮಾಡಿದ್ದರಿಂದ ಪುಣ್ಯಕ್ಷೇತ್ರವಾಗಿದೆ, ಈ ಕ್ಷೇತ್ರ ಸಮಾಜದ ಎಲ್ಲ ವರ್ಗಕ್ಕೂ ಮಾರ್ಗದರ್ಶನ ನೀಡುತ್ತಿದ್ದು ಇಲ್ಲಿ ಶಿಕ್ಷಣ, ಊಟ ಮತ್ತು ವಸತಿಯ ತ್ರಿವಿಧ ದಾಸೋಹ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು ಶ್ರೀ ಮಠವು ಸಮಾಜದ ಅಭಿವೃದ್ದಿಗೆ ಮತ್ತು ಸಮಾಜದ ಏಳ್ಗೆಗೆ ಮತ್ತಷ್ಟು ಶ್ರಮಿಸಲಿದೆ ಎಂದರು.

ಕ್ಷೇತ್ರದ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ ಕಾಲಗ್ನಿ ರುದ್ರಮುನಿ ಮಹಾಸ್ವಾಮಿಗಳು  ಈ ಕ್ಷೇತ್ರಕ್ಕೆ ತಮ್ಮ 12ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ ಸಮಾಜದ ಸೇವೆಗೆ ಜೀವನವನ್ನು ಮುಡುಪಾಗಿಟ್ಟರು, ಸಮಾಜದ ಅಂಧಕಾರವನ್ನು ಶಿಕ್ಷಣದಿಂದ ಮಾತ್ರ ತೊಲಗಿಸಲು ಸಾಧ್ಯ ಎಂಬುದನ್ನು ಮನಗಂಡು ಸರ್ವರಿಗೂ ವಿದ್ಯಾಭ್ಯಾಸ ಕಲಿಸುವ ಶಿಕ್ಷಣ ಸಂಸ್ಥೆಯನ್ನು ತೆರೆದರು ಎಂದರು.

12 ಮಂದಿ ಶಿಷ್ಯರಿಂದ ಪ್ರಾರಂಭಗೊಂಡ ವಿದ್ಯಾಸಂಸ್ಥೆಯು ಇಂದು 2500 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ದೊಡ್ಡ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ, ದೀನ ದಲಿತರು, ಬಡ ವಿದ್ಯಾರ್ಥಿಗಳಂತ ಸಾವಿರಾರು ಮಕ್ಕಳಿಗೆ ದಾರಿ ದೀಪವಾಗಿದೆ ಎಂದರು. 

ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ಕೆ.ಎಲ್‌.ಇ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ಮಾಜಿ ಸಚಿವರಾದ ರೇಣುಕಾಚಾರ್ಯ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಪಾಂಡಿಚೇರಿ ಇಂಡಿಯನ್‌ ಪೀಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ.ಗೋಬಿ ಸುಂದರ್‌ ರಾಜನ್‌, ಭಾರತ ಸರ್ಕಾರ ಆರ್ಥಿಕ ಇಲಾಖೆ ಸದಸ್ಯ ಆನಂದಸಾಹು ಮತ್ತಿತರರು ಉಪಸ್ಥಿತರಿದ್ದರು.

ಭಕ್ತಸಾಗರ:  ಈ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತಮಿಳು ನಾಡು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಠದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವಾ ಕಾರ್ಯಕ್ಕೆ ಇಂಡಿಯನ್‌ ಪೀಸ್‌ ವಿಶ್ವವಿದ್ಯಾಲಯವು ಮುಮ್ಮಡಿ ಶಿವರುದ್ರ ಸ್ವಾಮಿಗಳಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿರುವುದಕ್ಕೆ ಬಿ.ಎಸ್‌.ಯಡಿಯೂರಪ್ಪ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.