ADVERTISEMENT

‘ಭಕ್ತರಿಗೆ ದಾಸೋಹ ಪುಣ್ಯದ ಕೆಲಸ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:11 IST
Last Updated 10 ಏಪ್ರಿಲ್ 2017, 6:11 IST
ಮಾಗಡಿಯಲ್ಲಿ ತಿರುವೆಂಗಳನಾಥ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಬಾಲಗಂಗಾಧರ ನಾಥ ಸ್ವಾಮಿ ಒಕ್ಕಲಿಗರ ಅರವಟಿಗೆಯಲ್ಲಿ ಅನ್ನದಾಸೋಹವನ್ನು ಜೆಡಿಎಸ್‌ ವರಿಷ್ಠ  ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು, ನಂಜಾವಧೂತ ಸ್ವಾಮಿ ಮತ್ತು ಸೌಮ್ಯನಾಥ ಸ್ವಾಮಿ ಇದ್ದರು
ಮಾಗಡಿಯಲ್ಲಿ ತಿರುವೆಂಗಳನಾಥ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಬಾಲಗಂಗಾಧರ ನಾಥ ಸ್ವಾಮಿ ಒಕ್ಕಲಿಗರ ಅರವಟಿಗೆಯಲ್ಲಿ ಅನ್ನದಾಸೋಹವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು, ನಂಜಾವಧೂತ ಸ್ವಾಮಿ ಮತ್ತು ಸೌಮ್ಯನಾಥ ಸ್ವಾಮಿ ಇದ್ದರು   

ಮಾಗಡಿ: ಕೆಂಪೇಗೌಡರ ತವರೂರು ದೇವಭೂಮಿ ಮತ್ತು ಧರ್ಮಭೂಮಿ ಮಾಗಡಿಯಲ್ಲಿ ಯುಗಯೋಗಿ ಡಾ.ಬಾಲಗಂಗಾಧರನಾಥ ಸ್ವಾಮಿ ಹೆಸರಿನಲ್ಲಿ ಅರವಟಿಗೆ ಆರಂಭಿಸಿ ಲಕ್ಷಾಂತರ ಭಕ್ತರಿಗೆ ದಾಸೋಹ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ತಿರುಮಲೆ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಬಾಲಗಂಗಾಧರನಾಥಸ್ವಾಮಿ ಒಕ್ಕಲಿಗರ ಅರವಟಿಗೆಯಲ್ಲಿ ‘ಅನ್ನದಾಸೋಹ’ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು –ಮಂಗಳೂರು ಮಾರ್ಗವಾಗಿ ಸಂಚರಿಸುವ ರೈಲಿಗೆ ಗೋಮಟೇಶ್ವರ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲಾಗುವುದು. ಜೆಡಿಎಸ್‌ ವತಿಯಿಂದ ಜೈನ ಸಮುದಾಯದಿಂದ 7 ಜನ ಶಾಸಕರನ್ನು ಆಯ್ಕೆ ಮಾಡಿಸುವ ಯತ್ನ ನಡೆದಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಜೆಡಿಎಸ್‌ ಪಕ್ಷದಿಂದಲೇ ಎಂಬ ಖಚಿತ ನಂಬಿಕೆ ಇದೆ ಎಂದರು.

ಏ.23ರಂದು ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಾಧೀಶ ನಂಜಾವಧೂತ ಸ್ವಾಮಿಜಿ ಆರಂಭಿಸಲಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸುತ್ತೇವೆ. ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದರು.

ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಾಧೀಶ ನಂಜಾವಧೂತ ಸ್ವಾಮೀಜಿ ಮಾತನಾಡಿ, ಒಕ್ಕಲು ಸಮುದಾಯ ಒಂದೇ ಕೊಡೆಯ ಕೆಳಗೆ ಬೆರೆಯಬೇಕು. ಎರಡು ಅರವಟಿಗೆ ಬೇಡ ಎಂದರು. ಏ.23ರಂದು ಪಟ್ಟನಾಯಕನಹಳ್ಳಿಯಲ್ಲಿ ನಡೆಯಲಿರುವ ಶಾಶ್ವತ ನೀರಾವರಿ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಆದಿಚುಂಚನಗಿರಿ ವಿಜಯ ನಗರ ಶಾಖಾ ಮಠಾಧೀಶ ಸೌಮ್ಯನಾಥ ಸ್ವಾಮಿ, ಕುಮಾರ ಚಂದ್ರಶೇಖರ ಸ್ವಾಮಿ,ರಾಜ್ಯ ಕರಕುಶಲ ಮಂಡಳಿ ಅಧ್ಯಕ್ಷೆ ಕಮಲಮ್ಮ ಹನುಮಂತೇಗೌಡ, ಕೆ.ಬಾಗೇಗೌಡ, ಬೆಟ್ಟಸ್ವಾಮಿ ಗೌಡ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಗಂಗಾಧರ್‌, ಜಿಲ್ಲಾಪಂಚಾಯಿತಿ ಸದಸ್ಯ ಎ.ಮಂಜುನಾಥ, ತೇಜಶ್ರೀ ಕೃಷ್ಣಮೂರ್ತಿ, ಅರವಟಿಗೆ ಟ್ರಸ್ಟಿನ ಕೆ.ಎಚ್‌.ಕೃಷ್ಣಮೂರ್ತಿ, ಪದಾಧಿಕಾರಿಗಳು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.