ADVERTISEMENT

ಮದ್ದೂರಿನಿಂದ ಸ್ಪರ್ಧೆಗೆ ಯೋಗೇಶ್ವರ್‌ ಒಲವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 5:04 IST
Last Updated 13 ಏಪ್ರಿಲ್ 2017, 5:04 IST

ರಾಮನಗರ: ಮುಂಬರುವ ಚುನಾವಣೆಯಲ್ಲಿ ಮದ್ದೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ ಶಾಸಕ ಸಿ.ಪಿ. ಯೋಗೇಶ್ವರ್‌ ಹೇಳಿದರು. ಆದರೆ ಯಾವ ಪಕ್ಷದಿಂದ ತಾನು ಸ್ಪರ್ಧೆ ಮಾಡಲಿದ್ದೇನೆ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಿಂದಲೂ ಅಲ್ಲಿನ ಜನರ ಜೊತೆ ಒಡನಾಟ ಹೊಂದಿದ್ದೇನೆ. ರಾಮನಗರದಲ್ಲಿ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರಂತಹ ಘಟನಾಘಟಿ ನಾಯಕರು ಇದ್ದಾರೆ.

ಪಕ್ಕದ ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಇದ್ದು, ಅದನ್ನು ನೀಗಿಸುವ ಇಚ್ಛೆ ಹೊಂದಿದ್ದೇನೆ’ ಎಂದರು. ಚನ್ನಪಟ್ಟಣದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ ‘ಅಲ್ಲಿಯೂ ಸಾಕಷ್ಟು ಮಂದಿ ಕಾರ್ಯಕರ್ತರು ಇದ್ದಾರೆ’ ಎಂದರು.

ತತ್ವ–ಸಿದ್ಧಾಂತ ಗೊತ್ತಿಲ್ಲ: ‘ನಾನು ವೃತ್ತಿಪರ ರಾಜಕಾರಣಿ ಅಲ್ಲ. ನನಗೆ ತತ್ವ ಸಿದ್ಧಾಂತದ ಅರ್ಥವೂ ಗೊತ್ತಿಲ್ಲ. ಸಮಾಜಮುಖಿಯಾಗಿ ಜನರ ಅಶೋತ್ತರಗಳ ಮೇಲೆ ಕೆಲಸ ಮಾಡುತ್ತೇನೆ. ನನ್ನದು ಅಭಿವೃದ್ಧಿ ಮಂತ್ರ’ ಎಂದು ಅವರು ಹೇಳಿದರು.

‘ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಪಕ್ಷಾಂತರ ಮಾಡುವ ಅನಿವಾರ್ಯತೆ ಅಂದು ಇತ್ತು. ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು. ಈಗ ಆ ಬಯಕೆ ಈಡೇರಿದೆ. ಇನ್ಯಾವ ಕಾರಣಕ್ಕೆ ನಾನು ಪಕ್ಷಾಂತರ ಮಾಡಲಿ’ ಎಂದು ಯೋಗೇಶ್ವರ್ ಪ್ರಶ್ನಿಸಿದರು.

ಪಕ್ಷಾಂತರ ಇಲ್ಲ: ‘ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳುವ  ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಚುನಾವಣೆ ಸಾಕಷ್ಟು ದೂರದಲ್ಲಿದ್ದು ಸೂಕ್ತಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ನನ್ನ ರಾಜಕೀಯ ತೀರ್ಮಾನ ಈ ಜನತೆಯ ಹಿತಕ್ಕಾಗಿ ಆಗಿರುತ್ತದೆ’ ಎಂದರು.

ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ‘ಅವರು ಹಿರಿಯ ರಾಜಕಾರಣಿ, ಮುತ್ಸದ್ಧಿ . ಅವರ ನಡೆಯೇ ಬೇರೆ, ನನ್ನ ದಾರಿಯೇ ಬೇರೆ’ ಎಂದರು. ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಸ್ಥಾನಕ್ಕೆ ಚನ್ನಪಟ್ಟಣ ಎಪಿಎಂಸಿ ಅಧ್ಯಕ್ಷ ಕುಮಾರ್ ಆಯ್ಕೆ ಆಗಲು ಸಹಕರಿಸಿದವರಿಗೆ ಅವರು ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT