ADVERTISEMENT

‘ಸತ್ಯ, ಅಹಿಂಸೆಯ ತತ್ವ ಜಗತ್ತಿಗೆ ಮಾದರಿ’

ರಾಮನಗರ ಜಿಲ್ಲಾಡಳಿತದ ವತಿಯಿಂದ ಮಹಾವೀರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 8:28 IST
Last Updated 12 ಏಪ್ರಿಲ್ 2017, 8:28 IST
ರಾಮನಗರದ ಗುರುಭವನದಲ್ಲಿ ಮಂಗಳವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಪುಷ್ಪ ಸಮರ್ಪಿಸಿದರು
ರಾಮನಗರದ ಗುರುಭವನದಲ್ಲಿ ಮಂಗಳವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಪುಷ್ಪ ಸಮರ್ಪಿಸಿದರು   

ರಾಮನಗರ: ‘ವರ್ಧಮಾನ ಮಹಾವೀರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಬಿ.ಆರ್‌. ಮಮತಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಗವಾನ್‌ ಮಹಾವೀರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸತ್ಯ ಮತ್ತು ಅಹಿಂಸೆ ಜೈನ ಧರ್ಮದ ತ್ವತಗಳಾಗಿದ್ದು, ಅಮೆರಿಕಾ ಹಾಗೂ ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಿಗೂ ಪ್ರೇರಣೆಯಾಗಿವೆ. ಈ ಧರ್ಮಕ್ಕೆ ವಿಶೇಷವಾದ ಮಹತ್ವವಿದ್ದು, ಸಮಾನತೆ ಸಮಾಜ ನಿರ್ಮಾಣಕ್ಕೆ ಅವರ ಶ್ರಮ ಅನುಕರಣೀಯ’ ಎಂದರು.

‘ಅಹಿಂಸೆಯೇ ಪರಮ ಧರ್ಮ ಎಂಬುದು ಮಹಾವೀರರ ಸರ್ವಕಾಲಿಕ ಸತ್ಯವಾದ ದಿವ್ಯ ಸಂದೇಶವಾಗಿದೆ. ಇದರಲ್ಲಿ ಜಗತ್ತಿನ ಎಲ್ಲ ಜೀವ ರಾಶಿಗಳಿಗೆ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಲಾಗಿದೆ. ಅಹಿಂಸಾ ತತ್ವವು ಮಾನವ ಸಮಾಜಕ್ಕೆ ನೀಡಿದ ಅನನ್ಯ ಸಂದೇಶವಾಗಿದೆ’ ಎಂದು ತಿಳಿಸಿದರು.

‘24ನೇ ತೀರ್ಥಂಕರರು ಹಾಗೂ ಕೊನೆಯ ತೀರ್ಥಂಕರರು ಆಗಿದ್ದ ಮಹಾವೀರರು, ವೈಶಾಲಿ ರಾಜಮನೆತನದಲ್ಲಿ ಹುಟ್ಟಿದರೂ, ಸಕಲ ಸುಖ ವೈಭೋಗಗಳನ್ನು ತ್ಯಜಿಸಿ ಸನ್ಯಾಸಿಯಾದರು. ತ್ಯಾಗಮೂರ್ತಿಗಳಾಗಿದ್ದ ಅವರು ಅಹಿಂಸಾ ತತ್ವಗಳ ಬಗ್ಗೆ ದಾಖಲೀಕರಣ ಮಾಡಿದ್ದರಿಂದ ಅವರ ಸಂದೇಶ ಇತರರು ಅರಿತುಕೊಳ್ಳಲು ಸಾಧ್ಯವಾಗಿದೆ’ ಎಂದರು.

‘ಜೈನ ಧರ್ಮಕ್ಕೆ 8ರಿಂದ 10 ಸಾವಿರ ವರ್ಷಗಳ ಇತಿಹಾಸವಿದೆ. ಸಮಾಜ ಸುಧಾರಣೆಗಾಗಿ, ಜಗತ್ತಿನ ಒಳಿತಿಗಾಗಿ ಶ್ರಮಿಸಿದಂತಹ ಮಹನೀಯರು, ಸಂತರನ್ನು ಪಟ್ಟಭದ್ರ ಹಿತಾಸಕ್ತಿಗಾಗಿ ಒಂದೇ ಜಾತಿಗೆ ಸೀಮಿತಗೊಳಿಸುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವುದು ಸರಿಯಲ್ಲ. ಜೈನಧರ್ಮದ ತತ್ವ, ಸಂದೇಶಗಳು ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪೂರಕವಾಗಿವೆ’ ಎಂದು ತಿಳಿಸಿದರು.

ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಮಧುಸೂದನಾಚಾರ್ಯ ಜೋಷಿ ಉಪನ್ಯಾಸ ನೀಡಿ ‘ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳು ಅಮೂಲ್ಯವಾದ ಕೊಡುಗೆ  ನೀಡಿದ್ದಾರೆ. ಕನ್ನಡದ ಆದಿ ಕವಿ ಪಂಪ ಜೈನ ಧರ್ಮಕ್ಕೆ ಸೇರಿದವನು. ಇಂದಿನ ಆಧುನಿಕ ಕನ್ನಡ ಸಾಹಿತ್ಯಕ್ಕೂ ಜೈನ ವಿದ್ವಾಂಸರು ಕೊಡುಗೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರಸ್ತುತ ಸಂದರ್ಭದಲ್ಲಿ ವ್ಯಕ್ತಿ ಪೂಜೆಗಳು ಹೆಚ್ಚಾಗುತ್ತಿವೆ. ಆದರೆ ಅವರ ತತ್ವ, ಸಿದ್ಧಾಂತಗಳ ಅನುಕರಣೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಮನುಷ್ಯ ನೆಮ್ಮದಿಯಾಗಿ ಜೀವನ ನಡೆಸಲು ದುರಾಸೆಯನ್ನು ಬಿಡಬೇಕು’ ಎಂದು ತಿಳಿಸಿದರು.

ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್. ವೆಂಕಟೇಶ್‌ ಮಾತನಾಡಿ ‘ಹಿಂದೂ, ಜೈನ, ಬೌದ್ಧ, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಮಾನವನ ಒಳಿತನ್ನೇ ಬಯಸುವ ವಿಚಾರಗಳನ್ನು ಹೊಂದಿವೆ. ಆದರೆ ಅವುಗಳ ಅರ್ಥೈಸಿಕೊಳ್ಳುವಿಕೆಯ ವೈರುಧ್ಯಗಳಿಂದಾಗಿ ಜಗತ್ತಿನಲ್ಲಿ ಹಿಂಸೆ ನಡೆಯುತ್ತಿದೆ.

ಧರ್ಮಗಳಲ್ಲಿನ ಮೌಢ್ಯತೆ, ಅಜ್ಞಾನ, ಮೂಢ ನಂಬಿಕೆಗಳು, ಪಟ್ಟಭದ್ರ ಹಿತಾಸಕ್ತಿಗಳಿಂದ ನಲುಗಿದ್ದ ಸಮಾಜಕ್ಕೆ ಮಹಾವೀರರು, ಅಹಿಂಸೆಯ ತತ್ವಗಳನ್ನು ಬೋಧಿಸಿ, ಸುಧಾರಣೆಗೆ ಶ್ರಮಿಸಿದರು’ ಎಂದು ತಿಳಿಸಿದರು. ಜೈನ ಸಮುದಾಯದ ಮುಖಂಡರಾದ ಶ್ರೀಚಂದ್‌ ಜೈನ್, ಲಾದುಲಾಲ್‌ಜಿ ಜೈನ್‌, ದೀಪಕ್‌ ಜೈನ್‌, ಚನ್ನಕೇಶವ ಇತರರು ಇದ್ದರು.

ಗಾಯಕ ಚಂದ್ರಶೇಖರ್‌ ಮತ್ತು ತಂಡದವರು ನಾಡಗೀತೆ, ರೈತ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಸ್ವಾಗತಿಸಿದರು. ಉಪನ್ಯಾಸಕ ಅಂಕನಹಳ್ಳಿ ಪಾರ್ಥ ನಿರೂಪಿಸಿದರು.

*
ಮಾಂಸಾಹಾರ ಪದ್ಧತಿಯನ್ನು ಕೈಬಿಡಿ ಎಂದು ಮಹಾವೀರ 2600 ವರ್ಷಗಳ ಹಿಂದೆಯೇ ಹೇಳಿದ್ದರು. ಈ ವಿಷಯವನ್ನು ಈಗ ವೈದ್ಯರು ಹೇಳುತ್ತಿದ್ದಾರೆ.
-ಮಧುಸೂದನಾಚಾರ್ಯ ಜೋಷಿ,
ಸಹಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT