ADVERTISEMENT

ಹರಿದು ಬಂದ ಗಣ್ಯರ,ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 10:36 IST
Last Updated 23 ಮೇ 2017, 10:36 IST
ಕನಕಪುರ ದೇಗುಲಮಠದ ಲಿಂಗೈಕ್ಯ ಕಿರಿಯ ಮುಮ್ಮಡಿ ಮಹಾಲಿಂಗಸ್ವಾಮೀಜಿ ಅವರ  ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು
ಕನಕಪುರ ದೇಗುಲಮಠದ ಲಿಂಗೈಕ್ಯ ಕಿರಿಯ ಮುಮ್ಮಡಿ ಮಹಾಲಿಂಗಸ್ವಾಮೀಜಿ ಅವರ ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು   

ಕನಕಪುರ:  ವಿರಕ್ತ ಮಠಗಳಲ್ಲಿ ಒಂದಾದ ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ದೇಗುಲಮಠದ ಮುಮ್ಮಡಿ ಮಹಾ ಲಿಂಗಸ್ವಾಮೀಜಿ ಲಿಂಗೈಕ್ಯ ವಿಧಿ ವಿಧಾನ ವೀರಶೈವ ಪದ್ಧತಿಯಂತೆ ದೇಗುಲಮಠದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ನಡೆಯಿತು.

1998ರ ಮೇ 15 ರಂದು ದೇಗುಲ ಮಠದ12ನೇ ಪೀಠಾಧ್ಯಕ್ಷರಾಗಿ ನೇಮಕಗೊಂಡ ಮುಮ್ಮಡಿ ಮಹಾಲಿಂಗಸ್ವಾಮೀಜಿ ಮಠದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಿ ನಿರಂತರ 19ವರ್ಷಗಳ ಕಾಲ ಮಠದ ಅಭಿವೃದ್ಧಿಗೆ ಶ್ರಮಿಸಿದ ಕಾಯಕ ಜೀವಿ.

600 ವರ್ಷಗಳ ಇತಿಹಾಸ ಹೊಂದಿರುವ ದೇಗುಲ ಮಠವನ್ನು ಅಭಿವೃದ್ಧಿಗೊಳಿಸಿ ಪಕ್ಕದ ತಮಿಳುನಾಡಿನ ಗಡಿಗ್ರಾಮಗಳಿಂದ ಮಲೇಮಹದೇಶ್ವರ ಬೆಟ್ಟದವರೆಗೆ, ಹಳೇ ಮೈಸೂರು ಭಾಗದಿಂದ ಸಿದ್ದಗಂಗಾ ಮಠದವರೆಗೂ ಮಠದ ಭಕ್ತರನ್ನು ಸಂಪಾಧಿಸಿದ್ದಾರೆ.

ADVERTISEMENT

ದೇಗುಲ ಮಠದ ಮುಖವಾಣಿಯಾದ ‘ದೇಗುಲಸಿರಿ’ ಎಂಬ ಮಾಸಿಕ ಪತ್ರಿಕೆ 1999ರಲ್ಲಿ ಪ್ರಾರಂಭಮಾಡಿ ರುದ್ರಾ ಭಿಷೇಕ ಮತ್ತು ಅನ್ನದಾಸೋಹವನ್ನು ಭಕ್ತರು ಮತ್ತು ದಾನಿಗಳ ಹೆಸರಿನಲ್ಲಿ ನಿರಂತರವಾಗಿ ಮಾಡುತ್ತಾ ಅನೇಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕವಾಗಿ ಮಠವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯದರು.

ಗದ್ದುಗೆ: ಮಠದ 10ನೇ ಪೀಠಾಧಿಪತಿ ಇಮ್ಮಡಿ ಮಹಾಲಿಂಗಸ್ವಾಮೀಜಿ ಉತ್ತರಾಧಿಕಾರಿಯಾಗಿ 12ನೇ ಪೀಠಾಧಿಪತಿಯಾಗಿ ಬಂದ ಮುಮ್ಮಡಿ ಮಹಾಲಿಂಗಸ್ವಾಮೀಜಿ ಇಮ್ಮಡಿ ಮಹಾಲಿಂಗಸ್ವಾಮೀಜಿ ಗದ್ದುಗೆಯ ಎಡಭಾಗದಲ್ಲಿ ಅವರ ಕ್ರಿಯಾಸಮಾಧಿ ಕಾರ್ಯಕ್ರಮ ನೆರವೇರಿಸಿ ಗದ್ದುಗೆ ನಿರ್ಮಾಣ ಮಾಡಲಾಯಿತು.

ಗಣ್ಯರು ಭಾಗಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ಮರಿತಿಬ್ಬೇಗೌಡ, ಪುಟ್ಟಣ್ಣ, ಎಸ್‌.ಟಿ.ಸೋಮಶೇಖರ್‌, ನರೇಂದ್ರಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಎಸ್‌.ರವಿ, ಮಾಜಿ ಶಾಸಕ ಸೊಗಡು ಶಿವಣ್ಣ, ಜೆಡಿಎಸ್‌ ಮುಖಂಡ ಡಿ.ಎಂ.ವಿಶ್ವನಾಥ್‌, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು,  ಬಿ.ಜೆ.ಪಿ. ಮುಖಂಡ ರುದ್ರೇಶ್‌, ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಬಿ.ನಾಗರಾಜು ಸೇರಿದಂತೆ ಗಣ್ಯರು ಸ್ವಾಮೀಜಿ ಅಂತಿಮ ದರ್ಶನ ಪಡೆದರು.
ಸಾರ್ವಜನಿಕರಿಗೆ ದರ್ಶನ: ಶ್ರೀಗಳ ಪಾರ್ಥೀವ ಶರೀರವನ್ನು ಮಠದ ಒಳಾಂಗಣದಲ್ಲಿಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆ 10–45ರವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮೆರವಣಿಗೆ: ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿಟ್ಟು ಮಠದ ಆವರಣರಿಂದ ಹೊರಟು ಎಂ.ಜಿ.ರಸ್ತೆ ಮೂಲಕ ಕೋಟೆ, ವಾಣಿ ಟಾಕೀಸ್‌ ಬಳಿಸಿಕೊಂಡು ಎಂ.ಜಿ.ರಸ್ತೆ ಮೂಲಕ ಮೇಗಳ ಬೀದಿಯ ಗಣೇಶ ದೇವಾಲಯದ ವೃತ್ತದ ಮಾರ್ಗವಾಗಿ ವಿವೇಕಾನಂದ ನಗರ, ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗದಿಂದ ಬೂದಿಕೆರೆ ರಸ್ತೆಯ ಮಾರ್ಗವಾಗಿ ಶ್ರೀಮಠಕ್ಕೆ ಬರಲಾಯಿತು.

ಕ್ರಿಯಾ ಸಮಾಧಿ: ಶ್ರೀಮಠದ ಪರಂಪರೆಯಂತೆ ಶ್ರೀಗಳ ಕ್ರಿಯಾಸಮಾಧಿ ಕಾರ್ಯ ಲವಣ, ವಿಭೂತಿಗಟ್ಟಿ ಜೋಡಿಸಿ ಮೇಲ್ಭಾಗದಲ್ಲಿ ಮಣೆಯಿಂದ ಮುಚ್ಚಿ ಆನಂತರ ಪೂಜಾ ಕಾರ್ಯ ನೆರವೇರಿಸಿ ಪೂರ್ಣಗೊಳಿಸಲಾಯಿತು.

ಮಠಾಧೀಶ ಸಮ್ಮುಖ: ಸುತ್ತೂರುಮಠ, ಮುರುಘಾಮಠ, ಸಿದ್ದಗಂಗಾಮಠ, ಮರಳೇಗವಿಮಠ, ಬೇಲಿಮಠ, ದೇವನೂರುಮಠ, ಕಂಚಿಕಲ್‌ ಬಂಡೇಮಠ, ಆದಿಚುಂಚನಗಿರಿ ಶಾಖಾ ಮಠಾ ಧೀಶರು, ಗಾವಡಗೆರೆಮಠ ಸೇರಿದಂತೆ ತಾಲ್ಲೂಕಿನ ಎಲ್ಲಾ ಮಠಗಳ ಮಠಾಧೀಶರು, ವೀರಶೈವ ಮುಖಂಡರು, ಮಠದ ಭಕ್ತರು ಹಾಗೂ ತಾಲ್ಲೂಕಿನ ಎಲ್ಲಾ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂಗಡಿ ಮುಂಗಟ್ಟು ಬಂದ್‌:  ಸ್ವಾಮೀಜಿ ಅವರ ನಿಧನದ ಹಿನ್ನೆಲೆ ಸೋಮವಾರ ಬೆಳಿಗ್ಗೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು.

ಶೈಕ್ಷಣಿಕ ಏಳಿಗೆಗೆ ಶ್ರಮ
ರಾಜಕೀಯ ವ್ಯಕ್ತಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಶ್ರೀಗಳು, ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ, ಉದ್ಯಮಿಗಳ ವಿಶ್ವಾಸ ಗಳಿಸಿದ್ದರು.ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಬೆಂಬಲದೊಂದಿಗೆ  ಮಠದ ಎಲ್ಲಾ ಕಾರ್ಯಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳನ್ನು ನಿರ್ವಾಣೇಶ್ವರ ಸ್ವಾಮೀಜಿ ಹೆಸರಲ್ಲಿ ಪ್ರಾರಂಭ ಮಾಡುವ ಮೂಲಕ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಿರಿಯ ವಿದ್ಯಾರ್ಥಿಗಳ ಹಾಗೂ ನೌಕರರ ಸಹಕಾರ ಸಂಘ  ಪ್ರಾರಂಭಿಸಿ ಸೌಹಾರ್ದ ಸಹಕಾರಿ ಸಂಘ ಹುಟ್ಟು ಹಾಕಲು ಶ್ರಮಿಸಿದ್ದರು.

ನಿರ್ವಾಣೇಶ್ವರ ಡಿ.ಇಡಿ ಮತ್ತು ಬಿ.ಇಡಿ ಕಾಲೇಜು ಸ್ಥಾಪನೆ, ಶ್ರೀ ನಿರ್ವಾಣೇಶ್ವರ ನರ್ಸಿಂಗ್‌ ಸ್ಕೂಲ್‌ ಅಂಡ್‌ ನರ್ಸಿಂಗ್‌ ಕಾಲೇಜು, ಎಸ್‌.ಎನ್‌.ಪಬ್ಲಿಕ್‌ ಶಾಲೆ, ಗುಂಡ್ಲುಪೇಟೆಯಲ್ಲಿ ನರ್ಸಿಂಗ್‌ ಕಾಲೇಜು ಮತ್ತು ಪಬ್ಲಿಕ್‌ ಶಾಲೆ ಹಾಗೂ ಮಠ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದಿಂದ ಅನುದಾನಿತ ಶಾಲೆ ಗಳನ್ನಾಗಿ ಮಾಡುವಲ್ಲಿ ಅವರ ಶ್ರಮ ಅಡಗಿದೆ.

ಹೈನುಗಾರಿಕೆಗೆ ಪ್ರೋತ್ಸಾಹ
ರಾಮನಗರದ ಸುಗ್ಗನಹಳ್ಳಿ ಗ್ರಾಮಾಂತರ ಪ್ರೌಢಶಾಲೆಯನ್ನು ಮಠಕ್ಕೆ ಪಡೆದು ಅಭಿವೃದ್ಧಿಗೊಳಿಸಿದರು. ಶಿಕ್ಷಣದ ಜತೆಗೆ ಪಡುವಣಗೆರೆ, ವಿರುಪಸಂದ್ರ, ಮಾದಾರಳ್ಳಿ, ಹತ್ತಿಹಳ್ಳಿ, ಬೂದಿಗುಪ್ಪೆ, ಜವನಮ್ಮನದೊಡ್ಡಿ ಗ್ರಾಮಗಳಲ್ಲಿದ್ದ ಕೃಷಿ ಜಮೀನಿನಲ್ಲಿ ವಾಣಿಜ್ಯ ಬೇಸಾಯ ಮಾಡುವ ಮೂಲಕ ಕೃಷಿ  ಹಾಗೂ ಹೈನುಗಾರಿಕೆ ಸ್ವಾಮೀಜಿ ಅವರು ಪ್ರೋತ್ಸಾಹ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.