ADVERTISEMENT

ಹುಂಡಿ ಒಡೆದು ಹಣದ ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:21 IST
Last Updated 6 ನವೆಂಬರ್ 2017, 9:21 IST
ಕೈಲಾಂಚ ಹೋಬಳಿಯ ರೇವಣಸಿದ್ದೇಶ್ವರ ಬೆಟ್ಟದ ಮಧ್ಯಭಾಗದಲ್ಲಿರುವ ಭೀಮೇಶ್ವರ ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ದೋಚಿರುವುದು.
ಕೈಲಾಂಚ ಹೋಬಳಿಯ ರೇವಣಸಿದ್ದೇಶ್ವರ ಬೆಟ್ಟದ ಮಧ್ಯಭಾಗದಲ್ಲಿರುವ ಭೀಮೇಶ್ವರ ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ದೋಚಿರುವುದು.   

ರಾಮನಗರ : ಇಲ್ಲಿನ ಕೈಲಾಂಚ ಹೋಬಳಿಯ ಪ್ರಸಿದ್ಧ ಯಾತ್ರಾ ಸ್ಥಳ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಮಧ್ಯಭಾಗದಲ್ಲಿರುವ ಭೀಮೇಶ್ವರ ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

ಬೆಟ್ಟದ ಮಧ್ಯಭಾಗದಲ್ಲಿರುವ ದೇವಾಲಯದಲ್ಲಿ ರಾತ್ರಿ ದೇವಸ್ಥಾನದ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಒಡೆದು ದುಷ್ಕರ್ಮಿಗಳು ಒಳನುಗ್ಗಿದ್ದಾರೆ. ದೇವಸ್ಥಾನದಲ್ಲಿದ್ದ ದೊಡ್ಡ ಹುಂಡಿಯ ಬೀಗ ಒಡೆದು ಅದರಲ್ಲಿದ್ದ ಸಾವಿರಾರು ರೂಪಾಯಿ ಹಣ ದೋಚಿರುವ ದುಷ್ಕರ್ಮಿಗಳು, ಸಿಸಿ ಟಿವಿ ಕ್ಯಾೆರಾಗಳನ್ನು ಅಲ್ಲೇ ಬಿಟ್ಟು ಸಿಸಿ ಟಿವಿಗೆ ಅಳವಡಿಸಿದ್ದ ಡಿವಿಆರ್ ಪಟ್ಟಿಗೆ, ಎಲ್.ಇ.ಡಿ. ಮಾನಿಟರ್ ಕದ್ದು ಪರಾರಿಯಾಗಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ‘ಈ ಬೆಟ್ಟದ ದೇವಾಲಯಗಳಲ್ಲಿ ಛತ್ರ, ವಸತಿ ಗೃಹಗಳಲ್ಲಿ ಆಗಿಂದಾಗ್ಗೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ಮಾಡುವ ಮೂಲಕ ಕಳ್ಳರನ್ನು ಪತ್ತೆಹಚ್ಚಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

ADVERTISEMENT

ಕಾವಲುಗಾರರನ್ನು ನೇಮಿಸಲು ಒತ್ತಾಯ: ಈ ಬೆಟ್ಟದ ಪ್ರತಿ ದೇವಸ್ಥಾನದಲ್ಲೂ ಹುಂಡಿಗಳಿವೆ. ಪ್ರತಿನಿತ್ಯ ಬರುವ ಭಕ್ತರಿಂದ ಸಾವಿರಾರು ಹಣ ಹುಂಡಿಯಲ್ಲಿ ಸಂಗ್ರಹವಾಗುತ್ತದೆ. ಯಾವುದೇ ದೇವಾಲಯದಲ್ಲಿ ರಾತ್ರಿ ಕಾವಲುಗಾರರು ಇಲ್ಲದಿರುವುರಿಂದ ಕಳ್ಳರು ಹುಂಡಿ ಒಡೆಯಲು ಸುಲಭವಾಗಿದೆ.

ದೇವಸ್ಥಾನಗಳಿಗೆ ರಾತ್ರಿ ಕಾವಲುಗಾರರನ್ನು ಕೂಡಲೇ ಮುಜರಾಯಿ ಇಲಾಖೆ ನೇಮಿಸಬೇಕು ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೇಣುಕಾಪ್ರಸಾದ್, ದೇವರದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ನಾಯಕ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.