ADVERTISEMENT

ಅಸ್ವಚ್ಛತೆಯ ತಾಣ ಖಾಸಗಿ ಬಸ್ ನಿಲ್ದಾಣ

ಅರ್ಚನಾ ಎಂ.
Published 18 ಸೆಪ್ಟೆಂಬರ್ 2017, 9:39 IST
Last Updated 18 ಸೆಪ್ಟೆಂಬರ್ 2017, 9:39 IST
ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಬಳಿ ಬಿದ್ದಿರುವ ಕಸದ ರಾಶಿ
ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಬಳಿ ಬಿದ್ದಿರುವ ಕಸದ ರಾಶಿ   

ಶಿವಮೊಗ್ಗ: ಖಾಸಗಿ ಬಸ್ ನಿಲ್ದಾಣ ಸಂಪೂರ್ಣ ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ. ‘ಸ್ಮಾರ್ಟ್‌ಸಿಟಿ’ಗೆ ಆಯ್ಕೆಯಾಗಿರುವ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ ಹೊರ ಊರಿನ ಪ್ರಯಾಣಿಕರಿಗೆ ಆಕರ್ಷಿತವಾಗಿರಬೇಕಿತ್ತು. ಆದರೆ, ಬಸ್ ನಿಲ್ದಾಣದ ಸನಿಹದಲ್ಲಿರುವ ಖಾಲಿ ಜಾಗದಲ್ಲಿ ಕಸದ ರಾಶಿ ತುಂಬಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇನ್ನು ತಳ್ಳುಗಾಡಿ ವ್ಯಾಪಾರಿಗಳು ಸುರಿಯುವ ಕಸ, ತ್ಯಾಜ್ಯ ವಸ್ತುಗಳಿಂದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದೇ ಮರೀಚಿಕೆಯಾಗಿದೆ.

ಪ್ರತಿದಿನವೂ ಸಾವಿರಾರು ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಾರೆ. ಮಳೆ ನೀರು ನಿಂತು ಸೊಳ್ಳೆಗಳ ಉಗಮಸ್ಥಾನವಾದ ಜಾಗದಲ್ಲಿಯೇ ತಿಂಡಿ, ತಿನಿಸು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಹೊರ ಊರಿನಿಂದ ಬರುವ ಬಸ್‌ಗಳನ್ನು ಈ ನಿವೇಶನದ ಬಳಿಯೇ ನಿಲ್ಲಿಸುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ದುರ್ನಾತ ಸಹಿಸಿಕೊಂಡೇ ಹೋಗುತ್ತಿದ್ದಾರೆ. ಇನ್ನು ಕೆಲವರು ನೇರವಾಗಿ ಗಾಡಿಗಳ ಬಳಿಗೆ ತೆರಳಿ ತಮಗೆ ಬೇಕಾದ ತಿಂಡಿಗಳನ್ನು ನಿವೇಶನದ ನಿಂತ ನೀರಿನ ನಡುವೆಯೇ ಸೇವಿಸುವ ದೃಶ್ಯ ಕಾಣಸಿಗುತ್ತಿದೆ.

ಇಲ್ಲಿ ಮಾರಾಟ ಮಾಡುವ ಇಡ್ಲಿ, ಪಾನಿಪುರಿ, ಗೋಬಿ ಮಂಚೂರಿ, ಎಗ್‌ ರೈಸ್‌, ಬೋಂಡಾಗಳ ಮೇಲೆ ಸೊಳ್ಳೆ, ನೊಣಗಳು ಕುಳಿತರೂ ಗ್ರಾಮೀಣ ಪ್ರದೇಶದ ಜನರು, ವಿದ್ಯಾರ್ಥಿಗಳು ಅದನ್ನೇ ಸೇವಿಸಲು ಮುಂದಾಗುತ್ತಿದ್ದಾರೆ. ತಿಂಡಿ ಸೇವಿಸಿದ ಗ್ರಾಹಕರಿಗೆ ಕಾಯಿಲೆ ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಸರ್ಕಾರಿ ಮತ್ತು ಖಾಸಗಿ ಬಸ್‌ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಇದ್ದರೂ ಪ್ರಯಾಣಿಕರು ಹಣ ನೀಡಿ ಶೌಚಾಲಯ ಬಳಸಲು ಮುಂದಾಗುತ್ತಿಲ್ಲ. ಬದಲಿಗೆ ಖಾಲಿ ನಿವೇಶನವನ್ನೇ ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ.

ನಿಲ್ದಾಣದ ಸುತ್ತಲೂ ನಿರ್ಮಿಸಿರುವ ಗೋಡೆಗಳ ಬಳಿಯೇ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಮುಂದಾಗುತ್ತಿರುವುದರಿಂದ ಸ್ವಚ್ಛತೆಗೆ ಮತ್ತಷ್ಟು ಧಕ್ಕೆಯಾಗಿದೆ. ಮಳೆ ನೀರು ಸಂಗ್ರಹವಾಗುತ್ತಿರುವುದು ಹಾಗೂ ಮೂತ್ರ ವಿಸರ್ಜನೆಯಿಂದ ಕೂಡ ಸೊಳ್ಳೆಗಳ ಹಾವಳಿ ಅಧಿಕವಾಗುತ್ತಿದೆ. ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ನಿಲ್ದಾಣದಲ್ಲಿ ಎದುರಾಗಿದೆ.

ನಿವೇಶನದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅನುಕೂಲಕರ ವಾತಾವರಣವಿದ್ದರೂ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಸಮೀಪದಲ್ಲಿ ಒಂದು ಪುಟ್ಟ ದೇವಸ್ಥಾನವೂ ಇದೆ. ಗಲೀಜು ಮಾಡುವವರು ಇದ್ಯಾವುದನ್ನೂ ಗಮನಿಸುತ್ತಿಲ್ಲ. ಪಕ್ಕದಲ್ಲೇ ಇರುವ ಆಟೊ ನಿಲ್ದಾಣದ ಚಾಲಕರು ಆ ವಾಸನೆಯಲ್ಲಿಯೇ ಪ್ರಯಾಣಿಕರ ನಿರೀಕ್ಷೆಯಲ್ಲಿ ಕುಳಿತಿರುತ್ತಾರೆ. ರಾತ್ರಿ ವೇಳೆ ವಿದ್ಯುತ್‌ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಜನರ ಪರದಾಟ ಹೇಳತೀರದಾಗಿದೆ.

‘ಖಾಲಿ ನಿವೇಶನದಲ್ಲಿ ವ್ಯಾಪಾರಿಗಳು ಗಾಡಿಗಳಲ್ಲಿ ತಿಂಡಿ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಮಾಡುವ ತಿನಿಸುಗಳಿಗೆ ಯಾವುದೇ ಸ್ವಚ್ಛತೆ ಇಲ್ಲದಾಗಿದೆ. ಇದರಿಂದ ಸಾರ್ವಜನಿಕರಿಗೆ ಅನೇಕ ರೀತಿಯ ರೋಗಗಳು ಹರಡುತ್ತವೆ. ಮಹಾನಗರ ಪಾಲಿಕೆ ಆಡಳಿತ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು. ಡೆಂಗಿ ಹರಡುವ ಸೊಳ್ಳೆಗಳು ಇಲ್ಲಿರುವುದರಿಂದ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಪ್ರಯಾಣಿಕ ತ್ಯಾಗರಾಜ್.


‘ಖಾಲಿ ನಿವೇಶನದಲ್ಲಿಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. ಪಾಲಿಕೆ ಮೊದಲು ಈ ಸ್ಥಳಕ್ಕೆ ಬೇಲಿ ಹಾಕಬೇಕು. ಇಲ್ಲಿ ಸಣ್ಣ ಉದ್ಯಾನ ನಿರ್ಮಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೂರಲು ಆಸನದ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ಸ್ಥಳೀಯ ಪಾಂಡು ನಾಯ್ಕ. ‘ಖಾಸಗಿ ಬಸ್ ನಿಲ್ದಾಣದ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸುತ್ತಾರೆ ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮೊಹಿಲನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.