ADVERTISEMENT

ಉರ್ದು ಬಜಾರ್‌ ವಿವಾದ: ಗಾಂಧಿ ಬಜಾರ್‌ ಬಂದ್‌!

ವರ್ತಕರ ಪ್ರತಿಭಟನಾ ಮೆರವಣಿಗೆ, ಎಲ್ಲೆಡೆ ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 9:34 IST
Last Updated 1 ನವೆಂಬರ್ 2014, 9:34 IST

ಶಿವಮೊಗ್ಗ: ಗಾಂಧಿ ಬಜಾರ್‌ನ ಒಂದು ಬೀದಿಯ ಕೆಲ ಮಳಿಗೆಗಳ ನಾಮಫಲಕದಲ್ಲಿ ಉರ್ದು ಬಜಾರ್‌ ಎಂದು ಬರೆಸಲಾಗಿದೆ ಎನ್ನುವ ಆರೋಪ ಶುಕ್ರವಾರ ದೊಡ್ಡ ಪ್ರಮಾಣದ ತಿರುವು ಪಡೆದುಕೊಂಡಿತು.

ಗಾಂಧಿ ಬಜಾರ್‌ ವ್ಯಾಪ್ತಿಯ ಹಲವು ವ್ಯಾಪಾರಿಗಳು ಬೆಳಿಗ್ಗೆ ದಿಢೀರನೇ ಅಂಗಡಿ–ಮುಂಗಟ್ಟು ಬಂದ್‌ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವ್ಯಾಪಾರಿಗಳು ನಡೆಸಿದ ಬಂದ್‌ಗೆ ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಸಾಥ್‌ ನೀಡಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ನಗರದ ಗಾಂಧಿ ಬಜಾರ್‌ ವ್ಯವಹಾರ ಕೇಂದ್ರವಾಗಿದೆ. ಧಾರ್ಮಿಕವಾಗಿಯೂ ರಾಜಬೀದಿ ಮಾರ್ಗವಾಗಿದೆ. ಗಾಂಧಿ ಹೆಸರಿರುವ ಈ ಬಜಾರ್‌ನ ಕೆಲ ಭಾಗದ ನಾಮಫಲಕದಲ್ಲಿ ಸ್ವಯಂ ಘೋಷಿತವಾಗಿ ಉರ್ದು ಬಜಾರ್‌ ಎಂದು ಬರೆಸಲಾಗಿದೆ. ಕೂಡಲೇ ನಾಮಫಲಕ ತೆರವುಗೊಳಿಸಬೇಕು. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಿ.ಎಚ್‌.ರಸ್ತೆಯವರೆಗೂ ತೆರಳಿ ಮತ್ತೆ ಬಸವೇಶ್ವರ ದೇವಸ್ಥಾನಕ್ಕೆ ಮರಳಿದರು.

ನಂತರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವರ್ತಕರು, ಗಾಂಧಿ ಬಜಾರ್‌ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ವಾಹನಗಳು ಸಾಗುವುದೇ ದುಸ್ತರವಾಗಿದೆ. ಇಂತಹ ಕಿರಿದಾದ ಬೀದಿಗಳಲ್ಲಿ ನಾಲ್ಕು ಚಕ್ರದ ತಳ್ಳುಗಾಡಿ ಇಟ್ಟುಕೊಂಡು ಕೆಲವರು ವ್ಯಾಪಾರ ಮಾಡುತ್ತಿರುವ ಕಾರಣ ಜನರಿಗೆ ಓಡಾಡಲೂ ಕಿರಿಕಿರಿಯಾಗುತ್ತಿದೆ. ಅಲ್ಲದೇ ತಳ್ಳುಗಾಡಿ ಇಟ್ಟುಕೊಂಡ ಕೆಲವರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿರುವುದು ವರದಿಯಾಗಿದೆ. ಹಾಗಾಗಿ, ನಾಲ್ಕು ಚಕ್ರದ ತಳ್ಳುಗಾಡಿಗಳನ್ನು ಬಜಾರ್‌ನಿಂದ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಭಜರಂಗ ದಳದ ಮುಖಂಡರಾದ ದೀನ್‌ದಯಾಳ್, ರಾಜು, ಪಾಲಿಕೆ ಸದಸ್ಯ ರಾಮು, ವರ್ತಕರಾದ ರವಿ, ಶ್ರೀನಾಥ್‌, ರಾಜು, ಕೈಲಾಶ್‌, ನವೀನ್‌ ಮತ್ತಿತರರು ಉಪಸ್ಥಿತರಿದ್ದರು.

ಮಾತಿನ ಚಕಮಕಿ: ಬಿಜೆಪಿ–ಭಜರಂಗದ ಕಾರ್ಯಕರ್ತರು ಬೆಳಿಗ್ಗೆ ಅಂಗಡಿಗಳ ಬಾಗಿಲು ಮುಚ್ಚಿಸುತ್ತಿದ್ದ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹಾಗೂ ನಗರ ಕಾಂಗ್ರೆಸ್‌ ಉಪಾಧ್ಯಕ್ಷ ಸುನೀಲ್‌ ಅವರ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.
ಒಂದು ಬೀದಿಯ ಒಂದೆರಡು ಮಳಿಗೆಗಲ್ಲಿ ಉರ್ದು ಬಜಾರ್‌ ಎಂದು ಬರೆಸಿದ್ದಾರೆ ಎನ್ನುವುದನ್ನು ಇಡೀ ಗಾಂಧಿ ಬಜಾರ್‌ ಹೆಸರು ಬದಲಾಯಿಸಲಾಗಿದೆ ಎಂದು ಪ್ರತಿಬಿಂಬಿಸುತ್ತಿದ್ದೀರಿ. ಸಾಮರಸ್ಯ ಹಾಳು ಮಾಡುತ್ತಿದ್ದೀರಿ ಎಂದು ಸುನೀಲ್ ಚನ್ನಬಸಪ್ಪ ಅವರ ವಿರುದ್ಧ ಹರಿಹಾಯ್ದರು.

ಪಾಲಿಕೆ ಆಯುಕ್ತರ ಭೇಟಿ: ಪ್ರತಿಭಟನಾಕಾರರ ಮನವಿ ಆಲಿಸಿದ ಪಾಲಿಕೆ ಆಯುಕ್ತ ರವಿ ಅವರು, ಅನುಮತಿ ಇಲ್ಲದೇ ಯಾವ ಹೆಸರೂ ಬದಲಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌: ಎರಡು ಗಂಟೆ ನಡೆದ ಗಾಂಧಿ ಬಜಾರ್‌ ಬಂದ್‌ ಸಂದರ್ಭದಲ್ಲಿ ಬಜಾರ್‌ನ ಎಲ್ಲೆಡೆ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಅರೆ ಮಿಲಿಟರಿ ಪಡೆ ಸೇರಿದಂತೆ ಹಲವು ಪೊಲೀಸ್‌ ವಾಹನಗಳು ಗಸ್ತು ತಿರುಗುತ್ತಿದ್ದ ದೃಶ್ಯ ಕಂಡುಬಂತು. ಪ್ರತಿ ಬೀದಿಯಲ್ಲೂ ಪೊಲೀಸರ ಸರ್ಪಗಾವಲು ಇತ್ತು.

ಆರೋಪ ನಿರಾಕರಣೆ
ಗಾಂಧಿ ಬಜಾರ್‌ನ ಒಂದು ಬೀದಿಯಲ್ಲಿ 40 ವರ್ಷಗಳಿಂದ ಉರ್ದು ಪುಸ್ತಕಗಳ ಮಳಿಗೆ, ಮುದ್ರಣಾಲಯ ಇದೆ. ಆ ಮಳಿಗೆಯಿಂದಾಗಿ ಉರ್ದು ಬಜಾರ್‌ ಎಂದು ಹೆಸರು ಬಂದಿದೆ. ಆ ಬೀದಿಯ ಕೆಲ ವರ್ತಕರು ಸುಲಭ ಗುರುತಿಸುವಿಕೆಗಾಗಿ ಉರ್ದು ಬಜಾರ್‌ ಎಂದು ಬರೆಸಿದ್ದಾರೆ. ಗಾಂಧಿ ಬಜಾರ್‌ ಹೆಸರು ಬದಲಿಸುವ ಇಚ್ಚೆ ಇಲ್ಲಿನ ಯಾರಿಗೂ ಇಲ್ಲ. ಆದರೆ, ಕೆಲವರು ಅನಗತ್ಯ ವಿವಾದ ಸೃಷ್ಟಿಸಿ, ಶಾಂತಿ–ನೆಮ್ಮದಿಗೆ ಭಂಗ ತರುತ್ತಿದ್ದಾರೆ ಎಂದು ವರ್ತಕರಾದ ಇಮ್ರಾನ್‌, ಪರ್ವೀಜ್, ಮಹಮದ್‌ ಮತ್ತಿತರರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.