ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರಿಂದ ಯಡಿಯೂರಪ್ಪ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:25 IST
Last Updated 23 ಮೇ 2017, 6:25 IST

ಸಾಗರ:  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಉಪಾಹಾರ ಮಾಡುವ ನೆಪದಲ್ಲಿ ಹೋಟೆಲ್‌ನಿಂದ ತರಿಸಿದ ತಿಂಡಿ ತಿಂದಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದರು.

ಸಾಗರ ಹೋಟೆಲ್‌ ವೃತ್ತದಿಂದ ಮೆರವಣಿಗೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಉಪ ವಿಭಾಗಾಧಿಕಾರಿ  ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್‌.ಜಯಂತ್‌ ಮಾತನಾಡಿ, ‘ದಲಿತರ ಮನೆಗೆ ಭೇಟಿ ನೀಡಿದಂತೆ ನಾಟಕ ಮಾಡುತ್ತಿರುವ ಬಿಜೆಪಿ ಮುಖಂಡರ ಬಣ್ಣ ಸಾರ್ವಜನಿಕವಾಗಿ ಬಯಲಾಗಿದೆ.

ದಲಿತರ ಮನೆಯಲ್ಲಿ ಉಪಾಹಾರ ಮಾಡಿದಂತೆ ತೋರಿಸಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ದಲಿತರ ಬಗ್ಗೆ ತಮಗೆ ಇರುವ ಧೋರಣೆ ಯಾವ ರೀತಿಯದ್ದು ಎನ್ನುವುದನ್ನು ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಇತರ ಬಿಜೆಪಿ ಮುಖಂಡರು ಮಳೆ ಬೀಳುತ್ತಿರುವ ಈ ಸಂದರ್ಭದಲ್ಲಿ ಬರಗಾಲ ವೀಕ್ಷಣೆಗೆ ತೆರಳುತ್ತಿರುವುದು ಹಾಸ್ಯಾಸ್ಪದ ಸಂಗತಿ’ ಎಂದು ವ್ಯಂಗ್ಯವಾಡಿದರು.

‘ಸಂಸದರಾಗಿ ಕರ್ತವ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಯಡಿಯೂರಪ್ಪ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬರ ಪರಿಶೀಲನೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

‘ಬಿಜೆಪಿ ಮುಖಂಡರು ಅಂತರಂಗದಲ್ಲಿ ಜಾತ್ಯತೀತ ಸ್ವರೂಪದ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಅಂತರಂಗದಲ್ಲಿ ಕೋಮುವಾದಿ ಮನಸ್ಥಿತಿ ಇರುವವರು ದಲಿತರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿ ಹೊಂದಿರಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್‌.ಚಂದ್ರಪ್ಪ ಮಾತನಾಡಿ, ‘ಬಿಜೆಪಿ ಮುಖಂಡರಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ದಲಿತರ ನೆನಪಾಗುತ್ತದೆ.  ಯಡಿಯೂರಪ್ಪ ಹಾಗೂ ಇತರ ಬಿಜೆಪಿ ಮುಖಂಡರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು’ ಎಂದು ಅವರು ಆಗ್ರಹಿಸಿದರು.

ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ, ನಗರ ಘಟಕದ ಅಧ್ಯಕ್ಷ ಮಕ್ಬುಲ್‌ ಅಹಮದ್, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಸಿದ್ದಪ್ಪ, ಪಕ್ಷದ ಪ್ರಮುಖರುಗಳಾದ ಎನ್‌.ಉಷಾ, ಜಿ.ಕೆ.ಭೈರಪ್ಪ, ಎನ್‌.ಶ್ರೀನಾಥ್, ಆರ್‌.ಗಣಾಧೀಶ್‌, ಮೋಹನ್‌ ಕುಮಾರ್‌, ಅನ್ವರ್‌ ಭಾಷಾ, ಗ್ರೇಸಿ ಡಯಾಸ್‌, ವೀಣಾ, ಸರಸ್ವತಿ, ಪರಿಮಳ, ರವಿ ಜಂಬಗಾರು, ಗಲ್ಲಿ ವೆಂಕಟೇಶ್‌, ಮಹಾಬಲ ಕೌತಿ, ಸುಧಾಕರ ಕುಗ್ವೆ, ಶಬಾನಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.