ADVERTISEMENT

ಕುಡುಗುಂಜಿ ಪ್ರವಾಸಿ ಧಾಮಕ್ಕೆ ಚಿಂತನೆ: ಕಾಗೋಡು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:53 IST
Last Updated 25 ಏಪ್ರಿಲ್ 2014, 6:53 IST

ಕಾರ್ಗಲ್: ಸಾಗರ ತಾಲ್ಲೂಕಿನ ಅತ್ಯಂತ ಕುಗ್ರಾಮವಾದ ಕುಡುಗುಂಜಿ ಗ್ರಾಮವನ್ನು ಸುಂದರ ಪ್ರವಾಸಿ ತಾಣವಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ಕುಡುಗುಂಜಿ ಹಸಲರ ಕೇರಿಯಲ್ಲಿ ಗುರುವಾರ ಗಿರಿಜನರ ಅಹವಾಲು ಆಲಿಸಿ ಅವರು ಮಾತನಾಡಿದರು.
ಮಲೆನಾಡಿನ ದಟ್ಟ ಕಾನನಕ್ಕೆ ಹೆಸರಾದ ಕುಡುಗುಂಜಿಯ ವನಸಿರಿಯ ನಡುವೆ ಪರಿಸರ ಮತ್ತು ಅರಣ್ಯ ಸಂಪತ್ತಿಗೆ ಧಕ್ಕೆ ಬಾರದ
ರೀತಿಯಲ್ಲಿ ಕೃಷಿ ಜೀವನ ನಡೆಸಿಕೊಂಡು ಬರುತ್ತಿರುವ ಇಲ್ಲಿನ ಗಿರಿಜನರಿಗೆ ಸರ್ಕಾರ ಎಲ್ಲಾ ಮೂಲಸೌಕರ್ಯ ಒದಗಿಸಲು ಬದ್ಧವಾಗಿದೆ.

ಗ್ರಾಮೀಣ ಉದ್ಯೋಗ ಖಾತರಿಯ ಮೂಲಕ ಇಲ್ಲಿನ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಜನರ ಆರ್ಥಿಕಮಟ್ಟವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದ್ದು, ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಲು ಅವರು ಕರೆ ನೀಡಿದರು.

ಗಿರಿಜನ ಯುವಕರು ಸ್ವ ಉದ್ಯೋಗದ ಪರಿಲ್ಪನೆಯನ್ನು ಬೆಳೆಸಿಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾದ ಕೈ ಕೆಲಸಗಳನ್ನು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಯುವಕರಿಗೆ ಕಲ್ಪಿಸಿ ತರಬೇತಿ ನೀಡಲಾಗುವುದು. ಸಮಾಜದ ಮುಖ್ಯ ವಾಹಿನಿಗೆ ಸಾಮಾಜಿಕ ಸಮಾನತೆಯ ಮೂಲಕ ಗಿರಿಜನರು ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಸ್ಪೀಕರ್ ತಿಳಿಸಿದರು.

ಭಾರಂಗಿ ಹೋಬಳಿಯ ನಾಗವಳ್ಳಿ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗೆ ಪುನರ್ ಚಾಲನೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಸರಳಾ ಹೊಳೆಗೆ ಅಡ್ಡಲಾಗಿ ಕಟ್ಟುತ್ತಿರುವ ನೂತನ ಬ್ಯಾರೇಜ್ ಕಾಮಗಾರಿ ಸ್ಥಳ ವೀಕ್ಷಣೆ ಮಾಡಿ ಸಲಹೆ ಸೂಚನೆಗಳನ್ನು ನೀಡಿದರು.

₨ 1.10ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಪ್ರವಾಸದಲ್ಲಿ ಕೋಗಾರು, ಬಿಳಿಗಾರು ಮತ್ತು ಅರಲಗೋಡು ಗ್ರಾಮದಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಕುಡಿಯುವ ನೀರು, ರಸ್ತೆ, ಶೌಚಾಲಯ, ಇನ್ನಿತರ ಮೂಲಸೌಕರ್ಯಗಳಿಗೆ ಕ್ಷಿಪ್ರಗತಿಯಲ್ಲಿ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಅಕೇಶಿಯಾ ಪರಿಸರಕ್ಕೆ ಹಾನಿ
ಮಲೆನಾಡಿನ ಕಾಡಿನಲ್ಲಿ ವ್ಯಾಪಕವಾಗಿ ಹಬ್ಬಿರುವ ಅಕೇಶಿಯಾ ಗಿಡಗಳನ್ನು ಬೆಳೆಸುವ ಸಂಪ್ರದಾಯಕ್ಕೆ ಕೊನೆಗಾಣಿಸುವ ಕೆಲಸ ಆಗಬೇಕಿದೆ. ಇದರಿಂದ ಪರಿಸರಕ್ಕೆ ಹಾನಿಯ ವಿನಾ ಯಾವುದೇ ಪ್ರಯೋಜನವಿಲ್ಲ. ಪ್ರಾಣಿ ಪಕ್ಷಿಗಳ ಬದುಕಿಗೂ ಕೂಡ ಅಕೇಶಿಯಾ ಗಿಡಗಳು ಉಪಯೋಗಕ್ಕೆ ಬಾರದ ಸಾಧನವಾಗಿದೆ.

ಸಾಂಪ್ರಾದಾಯಿಕವಾಗಿ ದೊರೆಯುವ ಹಳ್ಳಿಗಾಡಿನ, ಹಲಸು, ಮಾವು, ನಂದಿ, ಮತ್ತಿ, ಹೊನ್ನೆ, ಇನ್ನಿತರ ಹಲವು ಬಗೆಯ ನೈಸರ್ಗಿಕ ವನದ ಗಿಡಗಳನ್ನು  ಬೆಟ್ಟ ಗುಡ್ಡಗಳಲ್ಲಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ ಎಂದು ಕಾಗೋಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.