ADVERTISEMENT

ತೀರ್ಥಹಳ್ಳಿ: ಹೆಚ್ಚುತ್ತಿರುವ ಮಂಗಗಳ ಸಾವು

ಮಂಗನ ಕಾಯಿಲೆಗೆ ವ್ಯಕ್ತಿ ಬಲಿ, ತಡವಾಗಿ ಬೆಳಕಿಗೆ ಬಂದ ಪ್ರಕರಣ; ಮಾರ್ಚ್‌ನಲ್ಲಿ ರೋಗ ಪ್ರಮಾಣ ಹೆಚ್ಚುವ ಸಾಧ್ಯತೆ

ಶಿವಾನಂದ ಕರ್ಕಿ
Published 16 ಫೆಬ್ರುವರಿ 2017, 5:36 IST
Last Updated 16 ಫೆಬ್ರುವರಿ 2017, 5:36 IST

ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪುಣೆ ಪ್ರಯೋಗಾಲಯದಿಂದ ಬಂದ ವರದಿ ಯಿಂದ ಇದು ತಡವಾಗಿ ಗೊತ್ತಾಗಿದೆ. ಇದರಿಂದ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. 

ಮೃತ ವ್ಯಕ್ತಿಯನ್ನು ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂದಿರಾನಗರದ ನಾರಾಯಣ (65) ಎಂದು ಗುರುತಿಸ ಲಾಗಿದೆ. ಜನವರಿ 23ರಂದು ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಗೆ ದಾಖಲಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ತೆರಳಿದ್ದರು. ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರು ವಾಗಲೇ ವೈಯಕ್ತಿಕ ಕಾರಣಗಳಿಂದಾಗಿ ಊರಿಗೆ ವಾಪಸ್ಸಾಗುತ್ತಿರುವಾಗ ಜನವರಿ 27ರಂದು ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ಹೆಚ್ಚುತ್ತಿರುವ ಮಂಗಗಳ ಸಾವು: ತಾಲ್ಲೂಕಿನಾದ್ಯಂತ ಮಂಗಗಳ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಮಂಗನ ಕಾಯಿಲೆ ಮುಂದಿನ ದಿನಗಳಲ್ಲಿ ವ್ಯಾಪಕವಾಗುವ ಭೀತಿ ಎದುರಾಗಿದೆ. ಆರಗ ಸಮೀಪದ ಸಾಲೂರಿನಲ್ಲಿ ಮೂರು ದಿನಗಳ ಹಿಂದೆ ಮಂಗ ಸತ್ತಿರುವುದು ವರದಿಯಾಗಿದೆ.  ಸಾಲೂರು ಗ್ರಾಮ ಪಂಚಾಯ್ತಿ ಹಿಂಭಾಗ ಸುದೀಪ್‌ ಅವರಿಗೆ ಸೇರಿದ ಒಕ್ಕಲು ಕಣದಲ್ಲಿ ಒಂದು ಮಂಗ ಸತ್ತಿದೆ. ಅಲ್ಲಿಗೆ ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮಂಗಗಳು ಪತ್ತೆಯಾಗಿವೆ. ಅರಳಸುರಳಿ, ತೆಂಗಿನ ಕೊಪ್ಪ ಬಳಿಯೂ ಮಂಗಗಳು ಸತ್ತಿವೆ.

ರೋಗಿಗಳ ದಾಖಲಾತಿ ಇಳಿಕೆ: ಒಂದು ವಾರದಿಂದ ಮಂಗನ ಕಾಯಿಲೆ ಇರುವ ನಾಲ್ವರು ರೋಗಿಗಳು ಪತ್ತೆಯಾಗಿದ್ದಾರೆ. ರೋಗಕ್ಕೆ ತುತ್ತಾದ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಎಚ್1ಎನ್‌1 ಪ್ರಕರಣ ನಿಯಂತ್ರಣಕ್ಕೆ ಬಂದಿದೆ. ಒಂದು ವಾರದಿಂದ ಈ ಕಾಯಿಲೆಯ ಒಂದೂ ಪ್ರಕರಣ ದಾಖಲಾಗಿಲ್ಲ. ಮಂಗನ ಕಾಯಿಲೆ ಇರುವ ಮೂವರು ವಯಸ್ಕರು ಹಾಗೂ ಮೂವರು ಮಕ್ಕಳು, ಎಚ್‌1ಎನ್‌1 ರೋಗಪೀಡಿತರಾದ 3 ಮಂದಿ ಜೆ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ತಿಳಿಸಿದ್ದಾರೆ.

ನೂರು ಹಾಸಿಗೆ ಸಾಮರ್ಥ್ಯ ಇರುವ ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ 25 ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಡಕಾಗುತ್ತಿದೆ. ಮಂಗನ ಕಾಯಿಲೆ ಹೆಚ್ಚಾಗಿರುವ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಡುವ, ಕೊಡಿಗಿ, ಬಾಳಬೈಲು ಗ್ರಾಮಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಸಂಚಾರಿ ಆರೋಗ್ಯ ಸೇವೆ ಕಾರ್ಯನಿರ್ವಹಿಸುತ್ತಿದೆ.

ಉಣ್ಣೆ ಕಡಿಯದಂತೆ ಮೈಗೆ ಹಚ್ಚಿಕೊ ಳ್ಳಲು ಡಿಎಂಪಿ ಎಣ್ಣೆಯನ್ನು ನೀಡಲಾ ಗುತ್ತಿದೆ. ರೋಗ ನಿಯಂತ್ರಣಕ್ಕೆ ಅನುಸರಿಸಬಹುದಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೋಗ ನಿಯಂತ್ರಣಕ್ಕೆ ಜನ ಸಂದನ: ಮಂಗನ ಕಾಯಿಲೆ, ಎಚ್‌1ಎನ್‌1 ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಸೋಂಕು ತಗಲಿದ ಕೂಡಲೇ ಸ್ವಪ್ರೇರಣೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಯು ರೋಗ ಹರಡದಂತೆ ತಡೆಗಟ್ಟಲು ಸೂಚಿಸಿರುವ ಎಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳಲು ಜನರು ಮುಂದಾಗುತ್ತಿದ್ದಾರೆ.

ಈಗಾಗಲೇ ತಾಲ್ಲೂಕಿನಲ್ಲಿ ಹೊನ್ನೆತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರಳಿ ಗ್ರಾಮದ ನಾಗೇಶ ಎಂಬುವವರು ಎಚ್‌1ಎನ್‌1 ರೋಗಕ್ಕೆ ಬಲಿಯಾಗಿದ್ದಾರೆ. ಮಂಗನ ಕಾಯಿಲೆಗೆ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಕ್ಸೆ ಕೆಂಜಿಗುಡ್ಡೆ ಗ್ರಾಮದ ಕುಡುಪ ಮೃತಪಟ್ಟಿದ್ದಾರೆ. ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು ಎನ್ನಲಾದ ಚಿಡುವ ಗ್ರಾಮದ ಶೇಷಪ್ಪನಾಯ್ಕ ಅವರ ದೇಹದಲ್ಲಿ ಆ ರೋಗದ ರೋಗಾಣು ಪತ್ತೆಯಾಗಿಲ್ಲ ಎಂದು ಪುಣೆ ಪ್ರಯೋಗಾಲಯ ವರದಿ ನೀಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಾರ್ಚ್‌ನಲ್ಲಿ ಮಂಗನ ಕಾಯಿಲೆ ತೀವ್ರಗೊಳ್ಳುವ ಲಕ್ಷಣಗಳು ಇದ್ದು, ಸಾರ್ವಜನಿಕರು ಆರೋಗ್ಯ ಇಲಾಖೆ ಸೂಚಿಸುವ ಕ್ರಮಗಳನ್ನು ಅಳವಡಿಸಿ ಕೊಳ್ಳುವುದೊಂದೇ ಉಳಿದಿರುವ ದಾರಿ.
– ಶಿವಾನಂದ ಕರ್ಕಿ

* ಕಳೆದ ವಾರ ಬಾಳೆಕೊಪ್ಪದಲ್ಲಿ 5 ಮಂಗಗಳು ಸತ್ತಿದ್ದು, ಈ ಭಾಗದ ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ.
– ಡಾ.ಕಿರಣ್‌, ತಾಲ್ಲೂಕು ವೈದ್ಯಾಧಿಕಾರಿ.

* ಆಸ್ಪತ್ರೆಯ ಮೂರು ಮಂದಿ ದಾದಿಯರಿಗೆ ಎಚ್‌1ಎನ್‌1 ರೋಗದ ಸೋಂಕು ತಗಲಿದೆ. ಸಿಬ್ಬಂದಿ ಕೊರತೆ ಕಾರಣ ಸಮರ್ಪಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.   
– ಡಾ.ಶಿವಪ್ರಕಾಶ್‌, ಜೆ.ಸಿ. ಆಸ್ಪತ್ರೆ ವೈದ್ಯಾಧಿಕಾರಿ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.