ADVERTISEMENT

ರೆಸಾರ್ಟ್ ನಿರ್ಮಾಣ ಕಾನೂನುಬಾಹಿರ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 4:56 IST
Last Updated 20 ಏಪ್ರಿಲ್ 2017, 4:56 IST

ಶಿವಮೊಗ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಆಲದೇವರ ಹೊಸೂರು ಗ್ರಾಮದ ಬಳಿ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ ಖಾಸಗಿ ಸಂಸ್ಥೆಯೊಂದು ಗಾಲ್ಫ್ ಕೋರ್ಟ್ ಹಾಗೂ ರೆಸಾರ್ಟ್ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ, ಮಾಹಿತಿಹಕ್ಕು, ಮಾನವಹಕ್ಕು ಸಂರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಆಲದೇವರ ಹೊಸೂರು ಗ್ರಾಮದ ಸರ್ವೆ ಸಂಖ್ಯೆ 28 ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಇತರೆ 8 ಸರ್ವೆ ಸಂಖ್ಯೆಗಳಲ್ಲಿ ಖಾಸಗಿ ಸಂಸ್ಥೆಯು ಕೆಲ ವರ್ಷಗಳಿಂದ ಗಾಲ್ಫ್ ಕೋರ್ಟ್, ರೆಸಾರ್ಟ್ ನಿರ್ಮಾಣ ಮಾಡುತ್ತಿದೆ. ಗ್ರಾಮದ ಸರ್ವೆ ಸಂಖ್ಯೆ 30ರ ಪ್ರದೇಶವು ಅರಣ್ಯ ವ್ಯಾಪ್ತಿಗೆ ಸೇರಿದ್ದು, ವನ್ಯಜೀವಿ ಸಂರಕ್ಷಿತ ವಲಯದಲ್ಲಿದೆ ಎಂದು ತಿಳಿಸಿದರು.

ಗಾಲ್ಫ್ ಕೋರ್ಟ್, ರೆಸಾರ್ಟ್ ನಿರ್ಮಾಣ ಕಾರ್ಯ ಕಾನೂನುಬಾಹಿರವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದಿಲ್ಲ. ಹಾಗೆಯೇ ರಾಷ್ಟ್ರೀಯ ಹಾಗೂ ರಾಜ್ಯ ವನ್ಯಜೀವಿ ಸಂರಕ್ಷಣೆ ಪ್ರಾಧಿಕಾರದಿಂದಲೂ ಅನುಮತಿ ಇಲ್ಲ. ಜಂಟಿ ಸರ್ವೆಗೆ ಆದೇಶವಿದ್ದರೂ ಇಲ್ಲಿಯವರೆಗೂ ಸರ್ವೆ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.

ADVERTISEMENT

ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಇರುವುದರಿಂದ ಅದು ನಿಷೇಧಿತ ವಲಯವಾಗಿದೆ. ಆದರೂ ಭ್ರಷ್ಟಾಚಾರದ ಮೂಲಕ ರೆಸಾರ್ಟ್‌ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಈ ಕುರಿತು ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಸಂಘಟನೆಯ ಮುಖಂಡ ಫಜ್ಲುದ್ದೀನ್, ಯೋಗೇಂದ್ರ ಎ.ಜಿ., ಬಾಷಾ, ನಸ್ರುತ್, ಅಣ್ಣಪ್ಪ, ಪ್ರಭು, ಸರಸ್ವತಿ, ನಾರಾಯಣಮೂರ್ತಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.