ADVERTISEMENT

ಶಿಥಿಲ ಸೇತುವೆಯಿಂದ ಅಪಾಯಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:26 IST
Last Updated 22 ಮೇ 2017, 5:26 IST

ಶಿವಮೊಗ್ಗ: ಹೊರವಲಯದ ಬೊಮ್ಮನಕಟ್ಟೆ ಬಡಾವಣೆ ಸಂಪರ್ಕಿಸುವ ರಾಜಕಾಲುವೆ ಸೇತುವೆ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ವಾಹನ ಸವಾರರಿಗೆ ಅಪಾಯದ ಭೀತಿ ಉಂಟು ಮಾಡಿದೆ. ನಗರಸಾರಿಗೆ ಬಸ್‌ಗಳು, ಆಟೊ ಸೇರಿದಂತೆ ವಾಹನಗಳು ಈ ಸೇತುವೆ ಮುಖಾಂತರವೇ ಸಂಚರಿಸುತ್ತವೆ. ಶಿಥಿಲಾವಸ್ಥೆಯ ಸೇತುವೆಯಲ್ಲಿಯೇ ಸಂಚಾರ ಅನಿವಾರ್ಯವಾಗಿದೆ. ವರ್ಷ ದಿಂದ ವರ್ಷಕ್ಕೆ ಈ ಸೇತುವೆ ರಸ್ತೆ ಕಿರಿದಾಗುತ್ತಿದ್ದು, ಮುಂಬರುವ ಮಳೆಗಾಲದಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಆತಂಕ ಸೃಷ್ಟಿಸಿದೆ.

ಹೆಚ್ಚಾದ ಲಾರಿಗಳ ಓಡಾಟ: ಈಚಿನ ದಿನಗಳಲ್ಲಿ ಮರಳು ತುಂಬಿದ ಲಾರಿಗಳು, ಕಲ್ಲು ತುಂಬಿದ ಟ್ರ್ಯಾಕ್ಟರ್‌ ಓಡಾಟ ಹೆಚ್ಚಾಗಿದೆ. ಪರಿಣಾಮ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಸೇತುವೆ ಬಳಿ ಕೆಲ ಆಟೊ ಹಾಗೂ ದ್ವಿ ಚಕ್ರವಾಹನಗಳು ವೇಗವಾಗಿ ಸಂಚರಿಸಿ, ಎದುರಿನಿಂದ ಬರುವ ವಾಹನಗಳಿಗೆ ದಿಕ್ಕೇ ತೋಚದಂತಹ ಪರಿಸ್ಥಿತಿ ಉಂಟಾಗುತ್ತಿದೆ.

ಮಳೆಗಾಲದಲ್ಲಿ ಇಲ್ಲಿನ ರಾಜಕಾಲುವೆ ತುಂಬಿ ಎರಡರಿಂದ ಮೂರು ಅಡಿಯವರೆಗೂ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಗುಂಡಿಗಳೂ ಇರುವು ದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಸೇತುವೆ ರಸ್ತೆಯ ಸಮೀಪವೇ ರೈಲು ಹಳಿ ಇದೆ. ಪೂರ್ತಿ ಉಬ್ಬು –ತಗ್ಗುನಿಂದ ಕೂಡಿರುವ ಈ ರಸ್ತೆಯಲ್ಲಿ ಪಾದಚಾರಿಗಳೂ ಸಂಚರಿಸಲು ಹರಸಾಹಸಪಡುತ್ತಾರೆ ಎನ್ನುತ್ತಾರೆ ವಾಹನ ಸವಾರರು.

ADVERTISEMENT

ಬೊಮ್ಮನಕಟ್ಟೆಗೆ ಬರುವವರಿಗೆ  ರೈಲು ಹಳಿ ದಾಟಿದ ಕೂಡಲೇ ಸಂಪೂರ್ಣ ತಗ್ಗಿನಲ್ಲಿ ಈ ಸೇತುವೆ ಸಿಗುತ್ತದೆ.  ಇನ್ನು ಸೇತುವೆಯಿಂದ ರೈಲು ಹಳಿ ಕಡೆಗೆ ಸಾಗುವ ವಾಹನಗಳು ವೇಗವಾಗಿ ಉಬ್ಬನ್ನು ಲೆಕ್ಕಿಸದೇ ಮುನ್ನುಗ್ಗುತ್ತವೆ. ನಗರ ಸಂಪರ್ಕಿಸಲು ಬೊಮ್ಮನಕಟ್ಟೆ ನಿವಾಸಿಗಳಿಗೆ ಈ ಮಾರ್ಗ ಹೊರತು ಪಡಿಸಿದರೆ  ಬೇರೆ ಯಾವುದೇ ಮಾರ್ಗವಿಲ್ಲ. ಒಂದು ವೇಳೆ ಸೇತುವೆ ಸಂಪೂರ್ಣ ಕುಸಿದುಬಿದ್ದರೆ,  ನಿವಾಸಿ ಗಳು ತೊಂದರೆ ಪಡುವುದು ಖಚಿತ ಎಂಬುದು ಸ್ಥಳೀಯರ ಆತಂಕ.

‘ಸಂಚಾರ ಸಮಸ್ಯೆಯಿಂದ ಕೂಡಿರುವ ಸೇತುವೆ ದುರಸ್ತಿಯತ್ತ   ಜಿಲ್ಲಾಡಳಿತ ಗಮನಹರಿಸಿಲ್ಲ. ಅಪಘಾತ ಸಂಭವಿಸುವ ಮೊದಲೇ ಸೇತುವೆ ಪುನರ್ ನಿರ್ಮಾಣದ ಕಾರ್ಯವಾಗ ಬೇಕು. ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು’ ಎಂದು ಒತ್ತಾಯಿಸುತ್ತಾರೆ ರಾಕೇಶ್‌. ‘ ಮೂರು ವರ್ಷಗಳ ಹಿಂದೆ ಸೇತುವೆ ಮೇಲೆ ಸುಮಾರು 5 ಅಡಿಗಳಷ್ಟು ನೀರು ನಿಂತು ಓಡಾಟಕ್ಕೆ ಭಾರಿ ತೊಂದರೆ ಯಾಗಿತ್ತು’  ಎನ್ನುತ್ತಾರೆ ಪ್ರತಾಪ್.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.