ADVERTISEMENT

ಶಿವಮೊಗ್ಗದಲ್ಲಿ ಪರಿಶೋಧನಾ ಪ್ರಯೋಗಾಲಯ

ತೀರ್ಥಹಳ್ಳಿ: ಮಂಗನ ಕಾಯಿಲೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಡಾ.ಕಿರಣ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:21 IST
Last Updated 12 ಜನವರಿ 2017, 11:21 IST
ತೀರ್ಥಹಳ್ಳಿ: ‘ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮೂರು ತಿಂಗಳ ಒಳಗಾಗಿ ಶಿವಮೊಗ್ಗದಲ್ಲಿ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಆರಂಭವಾಗಲಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ಹೇಳಿದರು.
 
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಮಂಗನ ಕಾಯಿಲೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಮಂಗನ ಕಾಯಿಲೆ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ರೋಗ ಕುರಿತು ಗ್ರಾಮೀಣ ಭಾಗದಲ್ಲಿ ಕೆಲವು ತಪ್ಪು ತಿಳಿವಳಿಕೆ ಜನರಲ್ಲಿವೆ. ಅದನ್ನು ದೂರ ಮಾಡಿ ಆರೋಗ್ಯ ಇಲಾಖೆ ನೀಡುವ ಸಲಹೆ, ಮಾರ್ಗಗಳನ್ನು ಅನುಸರಿಸಿದರೆ ಕಾಯಿಲೆ ತಡೆಗಟ್ಟಲು ಸಾಧ್ಯ’ ಎಂದರು. 
 
‘1957ರಲ್ಲಿ ಸೊರಬದ ಕ್ಯಾಸನೂರಿನಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಮಂಗನ ಕಾಯಿಲೆ (ಕೆಎಫ್‌ಡಿ) ಈಗ ರಾಜ್ಯದ ಚಾಮರಾಜನಗರ, ಗೋವಾ, ಕೇರಳ, ತಮಿಳು ನಾಡಿನಲ್ಲಿಯೂ ಕಾಣಿಸಿಕೊಂಡಿದೆ. ಪಶ್ಚಿಮ ಘಟ್ಟ ಸಾಲಿನ ಕಾಡಿನ ಪ್ರದೇಶದಲ್ಲಿ ಈ ರೋಗಬಾಧೆ ಹೆಚ್ಚಿದೆ’ ಎಂದರು.
 
ವಯಸ್ಕ ಉಣುಗು (ಉಣ್ಣಿ) ಕಾಡುಕೋಳಿ, ಇಲಿ, ಮೊಲ, ಜಾನುವಾರು ಸೇರಿದಂತೆ ಅನೇಕ ಬಗೆಯ ಪ್ರಾಣಿಗಳ ಮೂಲಕ ರೋಗ ಹರಡುತ್ತದೆ. ಒಂದು ವಯಸ್ಕ ಉಣುಗು 4ರಿಂದ 6 ಸಾವಿರ ಮೊಟ್ಟೆ ಇಡಬಲ್ಲದು. ಮಲೆನಾಡಿನ ಜನರು ಒಣಗಿದ ತರಗರೆಲೆಗಳನ್ನು ಗೊಬ್ಬರಕ್ಕೆ ಕೊಟ್ಟಿಗೆಗೆ ತರುವುದರಿಂದ ಮನೆಯಲ್ಲಿರುವ ಜನರಿಗೂ ರೋಗ ಹರಡುವ ಭೀತಿ ಎದುರಾಗಿದೆ’ ಎಂದರು. 
 
‘ಕಾಡಿಗೆ ತೆರಳುವ ಮುನ್ನ ಆರೋಗ್ಯ ಇಲಾಖೆ ನೀಡುವ ಎಣ್ಣೆಯನ್ನು ಮೈಗೆ ಸವರಿಕೊಂಡು ಹೋಗುವುದರಿಂದ ರೋಗ ತಡೆಯಬಹುದು’ ಎಂದರು.
 
ರೋಗ ತಡೆಗಟ್ಟಲು ಲಸಿಕೆ ಲಭ್ಯವಿದ್ದು, 6 ವರ್ಷದಿಂದ 60 ವರ್ಷದೊಳಗಿನ ರೋಗಪೀಡಿತ ಪ್ರದೇಶದ ಪ್ರತಿಯೊಬ್ಬರೂ ಮೊದಲ ಹಂತದಲ್ಲಿ ಎರಡು ಚುಚ್ಚುಮದ್ದು ಪಡೆಯಬೇಕು. ನಂತರ ಹೆಚ್ಚುವರಿಯಾಗಿ 6 ತಿಂಗಳಿನಿಂದ 9 ತಿಂಗಳ ಅಂತರದಲ್ಲಿ ಚುಚ್ಚುಮದ್ದು ಪಡೆದು ಸಂಪೂರ್ಣ ಗುಣ ಹೊಂದಬಹುದು’ ಎಂದರು.
 
ಎಲ್ಲೆಲ್ಲಿ ರೋಗ ಲಕ್ಷಣ?: ‘ಈ ಬಾರಿ ಮಂಗನ ಕಾಯಿಲೆ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಡುವ, ಕೊಡಿಗಿ, ಬಾಳಬೈಲು, ನೆಲ್ಲಿಸರ ಗ್ರಾಮ
ದಲ್ಲಿ ಮೊದಲು ಕಾಣಿಸಿಕೊಂಡಿದೆ. ರೋಗ ತಡೆಗಟ್ಟಲು ಅರಣ್ಯ, ಪಶು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಾ.ಕಿರಣ್ ಮಾಹಿತಿ ನೀಡಿದರು.
 
ಜೆ.ಸಿ ಆಸ್ಪತ್ರೆ ಮಕ್ಕಳ ವೈದ್ಯ ಡಾ.ಪ್ರಭಾಕರ್‌ ಮಾತನಾಡಿ, ‘ಫೆ.7ರಿಂದ 28ರವರೆಗೆ ದಡಾರ ಹಾಗೂ ರುಬೆಲ್ಲಾ ಕಾಯಿಲೆ ತಡೆಗಟ್ಟಲು ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 9 ತಿಂಗಳಿನಿಂದ 15 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಶಾಲೆಗಳಲ್ಲಿ ಲಸಿಕಾ ಕೇಂದ್ರ ಸ್ಥಾಪಿಸಲಾಗುವುದು. 2ನೇ ಹಂತದಲ್ಲಿ ಹಳ್ಳಿಗಳು, ಅಂಗನವಾಡಿ, ಸ್ಲಂ, ಕ್ಯಾಂಪ್‌ ಪ್ರದೇಶದಲ್ಲಿ ಲಸಿಕೆ ಹಾಕಲಾಗುವುದು. ಮೂರನೇ ಹಂತದಲ್ಲಿ ಲಸಿಕೆಯಿಂದ ದೂರ ಉಳಿದವರನ್ನು ಪತ್ತೆ ಮಾಡಿ ಲಸಿಕೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು. 
 
ತಹಶೀಲ್ದಾರ್‌ ಧರ್ಮೋಜಿರಾವ್‌, ತಾಲ್ಲೂಕು ಪಂಚಾಯ್ತಿ ಇಒ ಧನರಾಜ್‌, ಪ್ರಯೋಗಾಲಯ ವಿಭಾಗದ ಉಪ ನಿರ್ದೇಶಕ ರವಿಕುಮಾರ್‌, ಜೆಸಿ ಆಸ್ಪತ್ರೆ ವೈದ್ಯ ಡಾ.ಗಿರೀಶ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ್‌ ಹಾಜರಿದ್ದರು. ಆರೋಗ್ಯ ಇಲಾಖೆಯ ಜಗದೀಶ್‌ ನಿರೂಪಿಸಿದರು. 
 
***
ಜಾನುವಾರಿಗೆ ಚುಚ್ಚುಮದ್ದು: ಪ್ರಸ್ತಾವ 
‘ಜಾನುವಾರು ಮೂಲಕ ರೋಗ ಪೀಡಿತ ಉಣುಗು ಹಳ್ಳಿಗಳನ್ನು ಸೇರುವುದರಿಂದ ರೋಗ ಹರಡುವ ಸಾಧ್ಯತೆಯಿದ್ದು, ಜಾನುವಾರಿಗೆ ಉಣ್ಣೆ ಅಂಟದಂತೆ ಚುಚ್ಚುಮದ್ದು ನೀಡುವ ಪ್ರಸ್ತಾವ ಸಲ್ಲಿಸಲಾಗಿದೆ.  ಈಗಾಗಲೇ ಮಂಗನ ಕಾಯಿಲೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.