ADVERTISEMENT

ಸರ್ಕಾರದ ಪ್ರಸ್ತಾವಕ್ಕೆ ನಾಳೆ ಜನಮತಗಣನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:18 IST
Last Updated 16 ಜುಲೈ 2017, 8:18 IST

ಭದ್ರಾವತಿ: 20 ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಳಿಸಿರುವ ಇಲ್ಲಿನ ಎಂಪಿಎಂ ಕಾರ್ಖಾನೆಯ ಕಾರ್ಮಿಕರಿಗೆ ಸರ್ಕಾರ ನೀಡಿರುವ ಸ್ವಯಂ ನಿವೃತ್ತಿ ಯೋಜನೆ ಪ್ರಸ್ತಾವಕ್ಕೆ ಅನುಮೋದನೆ ನೀಡುವ ಕುರಿತು ಕಾರ್ಮಿಕ ಸಂಘ ಜುಲೈ 17ರಂದು ಜನಮತಗಣನೆ ನಡೆಸಲಿದೆ.

ಕಾಯಂ ನೌಕರರಿಗೆ ₹ 147.27 ಕೋಟಿ ಹಾಗೂ ಗುತ್ತಿಗೆ ಕಾರ್ಮಿಕರಿಗೆ ₹ 38.28 ಕೋಟಿ ಸೇರಿ ಒಟ್ಟು ₹ 185.53 ಕೋಟಿ ನೀಡುವ ಹಿಂದಿನ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಕಾರ್ಮಿಕರನ್ನು ಸಮಾಧಾನ ಪಡಿಸಲು ಸರ್ಕಾರವು ಜುಲೈ 7ರಂದು ₹ 400 ಕೋಟಿ ನೆರವನ್ನು ಘೋಷಿಸಿದೆ.

ಈ ಪ್ರಸ್ತಾವಕ್ಕೆ ಕಾರ್ಮಿಕ ಸಂಘ ಸಂಪೂರ್ಣ ಒಪ್ಪಿಗೆ ನೀಡಿದರೆ ಮಾತ್ರ ಎಲ್ಲರಿಗೂ ಸ್ವಯಂ ನಿವೃತ್ತಿ ಯೋಜನೆಯ ಲಾಭ ನೀಡಲು ಸಾಧ್ಯ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ನವೀನರಾಜ್‌ ಸಿಂಗ್‌ ಹೇಳಿದ್ದರಿಂದ ಕಾರ್ಮಿಕ ಸಂಘ ಈ ದಿಟ್ಟ ಹೆಜ್ಜೆ ಇಟ್ಟಿದೆ. ಕಾರ್ಮಿಕ ಸಂಘದ ಜನಮತಗಣನೆಯು ಸುಮಾರು 2,300 ಕುಟುಂಬಗಳ ಭವಿಷ್ಯ ನಿರ್ಧರಿಸಲಿದೆ.

ADVERTISEMENT

ಮೂರನೇ ಜನಮತಗಣನೆ: ಎಂಪಿಎಂ ಕಾರ್ಮಿಕ ಸಂಘದ ಇತಿಹಾಸದಲ್ಲಿ ಮೂರನೇ ಬಾರಿ ಜನಮತಗಣನೆ ನಡೆಯಲಿದೆ. 1990ರಲ್ಲಿ ಕಾರ್ಮಿಕ ಸಂಘದ ತಾತ್ಕಾಲಿಕ ಪದಾಧಿಕಾರಿ ಸಮಿತಿ ಅಸ್ತಿತ್ವದಲ್ಲಿದ್ದಾಗ ಅಂದಿನ ಅಧ್ಯಕ್ಷರ ಅಧಿಕಾರ ಬೇಕೋ, ಬೇಡವೋ ಎಂಬ ಬಗ್ಗೆ ಚುನಾವಣೆ ನಡೆಸಲಾಗಿತ್ತು. 1998ರಲ್ಲಿ ವೇತನ ಪರಿಷ್ಕರಣೆ ಕುರಿತು ಕಾರ್ಮಿಕ ಸಂಘ ಸರ್ಕಾರದ ಜತೆ ನಡೆಸಿದ ವೇತನ ಒಪ್ಪಂದ ಸರಿಯೋ, ತಪ್ಪೋ ಎಂಬ ಅಭಿಪ್ರಾಯ ಸಂಗ್ರಹಿಸಲು ಮತದಾನ ನಡೆದಿತ್ತು ಎಂದು ಹಿರಿಯ ಕಾರ್ಮಿಕರು ನೆನಪಿಸಿಕೊಳ್ಳುತ್ತಾರೆ.

‘ಸೋಮವಾರ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆಯುವ ಜನಮತ ಗಣನೆಗೆ ಒಟ್ಟು 930 ಕಾರ್ಮಿಕರು ಮತದಾನ ಹಕ್ಕು ಹೊಂದಿದ್ದಾರೆ. ಕಾರ್ಖಾನೆ ಮುಂಭಾಗದಲ್ಲಿ ನಡೆಯುವ ಜನಮತಗಣನೆ ಫಲಿತಾಂಶದ ಮೇಲೆ ಸರ್ಕಾರದ ಅಂತಿಮ ನಿರ್ಧಾರ ಹೊರಬೀಳಲಿದೆ’ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಜಿ. ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಎಷ್ಟು ಕೊಟ್ಟರೂ ಸಿದ್ಧ:  ‘ಕೆಲಸವಿಲ್ಲದೇ ಕಂಗಾಲಾಗಿರುವ ನಮ್ಮ ಪಾಲಿಗೆ ಸರ್ಕಾರ ಏನು ಕೊಟ್ಟರೂ ಒಪ್ಪಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದೇವೆ. ನಮ್ಮ ಹಸಿವು ನೀಗಿಸಿಕೊಳ್ಳಲು ತುರ್ತಾಗಿ ಒಂದು ನಿರ್ಧಾರ ಬರಬೇಕಿದೆ. ಹೀಗಾಗಿ ಈಗಿನ ಪ್ರಸ್ತಾವಕ್ಕೆ ನಮ್ಮ ಒಪ್ಪಿಗೆ ಇದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಾರ್ಮಿಕರು.

‘ಈಗಿನ ಲೆಕ್ಕಾಚಾರ ಪ್ರಕಾರ 2012ರ ಮೂಲವೇತನಕ್ಕೆ ತುಟ್ಟಿಭತ್ಯೆ ಸೇರಿಸದೇ ಪ್ರತ್ಯೇಕ ನೀಡುವ ಪ್ರಸ್ತಾವ ಪ್ರತಿ ಉದ್ಯೋಗಿ ಪಾಲಿಗೆ ₹ 2 ಲಕ್ಷದಿಂದ ₹ 3 ಲಕ್ಷ ಕಡಿಮೆ ಸಿಗುತ್ತದೆ. ಆದರೆ, ನಮಗೆ ಹೋರಾಟ ಮಾಡಿ ಸಾಕಾಗಿದೆ. ಸಿಕ್ಕಷ್ಟು ಸಿಗಲಿ ಎಂಬ ಮನಸ್ಥಿತಿಯಲ್ಲಿದ್ದೇವೆ’ ಎನ್ನುವ ಹಲವು ಕಾರ್ಮಿಕರು, ಉತ್ತಮ ಭವಿಷ್ಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಗುತ್ತಿಗೆ ಕಾರ್ಮಿಕರ ಬವಣೆ:  ಕಾಯಂ ಕಾರ್ಮಿಕರ ಸಂಘ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಂತಿದೆ. ಸರ್ಕಾರದ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ, 1,300 ಗುತ್ತಿಗೆ ಕಾರ್ಮಿಕರಿಗೆ ₹ 56.47 ಕೋಟಿ ಹಂಚಿಕೆ ಮಾಡಲಾಗುತ್ತದೆ.

ಸ್ವಯಂ ನಿವೃತ್ತಿ ಯೋಜನೆಯಡಿ ವರ್ಷಕ್ಕೆ 45 ದಿನ ಸಂಬಳ ನೀಡುವ ಪ್ರಸ್ತಾವವಿದೆ. ಅದನ್ನು 90 ದಿನಗಳಿಗೆ ವಿಸ್ತರಿಸಬೇಕು. ಖಾಯಂ ನೌಕರರಿಗೆ ನೀಡುವ ತುಟ್ಟಿಭತ್ಯೆ ನಮಗೂ ನೀಡಬೇಕು ಎಂಬ ಬೇಡಿಕೆ ಕುರಿತು ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ ಎನ್ನುತ್ತಾರೆ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ.

‘ಕಾರ್ಮಿಕರು ಬೇಸತ್ತಿದ್ದಾರೆ. ಕಾನೂನು ಸಮರ ನಡೆಸಲು ಗುತ್ತಿಗೆ ಕಾರ್ಮಿಕರು ಸಿದ್ಧರಿಲ್ಲ. ಹೀಗಾಗಿ ಸೋಮವಾರದ ಖಾಯಂ ನೌಕರರ ಜನಮತಗಣನೆ ತೀರ್ಮಾನದ ಮೇಲೆ ನಮ್ಮ ನಿರ್ಧಾರ ತಿಳಿಸುತ್ತೇವೆ’ ಎನ್ನುತ್ತಾರೆ ಎಐಟಿಯುಸಿ ಮುಖಂಡ ಡಿ.ಸಿ. ಮಾಯಣ್ಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.