ADVERTISEMENT

ಸಾಗುವಳಿ ಜಮೀನು ಡಿನೋಟಿಫೈಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:14 IST
Last Updated 21 ಮಾರ್ಚ್ 2018, 12:14 IST

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಡಿನೋಟಿಫೈ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ತಾಲ್ಲೂಕಿನ ಅನುಪಿನಕಟ್ಟೆ ಸ.ನಂ.127 ಹಾಗೂ ಕೂಡಿ ಸ.ನಂ.33 ಮತ್ತು 34 ರಲ್ಲಿ ಶರಾವತಿ ಮುಳುಗಡೆ ಮೂಲ ಸಂತ್ರಸ್ಥರು 1961-–62ರಲ್ಲಿ ಸಾಗುವಳಿ ಚೀಟಿ, ಖಾತೆ, ಪಹಣಿ ಪಡೆದು ಅಂದಿನಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಈ ಪ್ರದೇಶವನ್ನು ಇದೀಗ ಕೈಬಿಟ್ಟು ಶರಾವತಿ ಮುಳುಗಡೆ ಸಂತ್ರಸ್ತರಲ್ಲದವರು ಮತ್ತು ಬಗರ್ ಹುಕುಂ ಸಾಗುವಳಿದಾರರ ಪ್ರದೇಶವನ್ನು ಡಿನೋಟಿಫೈ ಮಾಡಲಾಗಿದೆ ಎಂದು ದೂರಿದರು.

ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಮೂಲ ಶರಾವತಿ ಮುಳುಗಡೆ ಸಂತ್ರಸ್ತರು ಇರುವ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರು. ಆದರೂ ಪುನಃ ಅಳತೆ ನಡೆಸಿ ಬೇರೆಯವರಿಗೆ ದಾಖಲೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

1963–64ರಿಂದ ಖಾತೆ ಪಡೆದು ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಮೊದಲು ಡಿನೋಟಿಫೈ ಮಾಡಬೇಕು. ಖಾತೆದಾರರನ್ನು ಕೆಟಗರಿ1 ರಲ್ಲಿ ನಮೂದಿಸಿ ಹಕ್ಕುಪತ್ರ ನೀಡಬೇಕು. ಡಿನೋಟಿಫೀಕೇಷನ್‌ನಲ್ಲಿ ಆಗಿರುವ ವ್ಯತ್ಯಾಸ ಸರಿಪಡಿಸಬೇಕು. ಬಗರ್‌ಹುಕುಂ ಸಾಗುವಳಿದಾರರು ಹಾಗೂ ಮುಳುಗಡೆ ದಾಖಲೆ ಇಲ್ಲದವರನ್ನು 2ನೇ ಕೆಟಗರಿಯಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಎಸ್.ಶಿವಮೂರ್ತಿ, ನಾಗರಾಜ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.