ADVERTISEMENT

‘ಎಂಪಿಎಂ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ’

ಜಿಲ್ಲಾಧಿಕಾರಿ ಕಚೇರಿ ಎದುರು ಎಂಪಿಎಂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 10:36 IST
Last Updated 26 ನವೆಂಬರ್ 2015, 10:36 IST

ಶಿವಮೊಗ್ಗ: ಭದ್ರಾವತಿ ಎಂಪಿಎಂ ಕಾರ್ಖಾನೆ ಅಭಿವೃದ್ಧಿಗೆ ಸೂಕ್ತ ಬಂಡವಾಳ ತೊಡಗಿಸಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಉಳಿಸಬೇಕು ಎಂದು ಒತ್ತಾಯಿಸಿ ಬುಧವಾರ ಎಂಪಿಎಂ ಕಾರ್ಮಿಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಭದ್ರಾವತಿಯಿಂದ ಬೈಕ್ ರ‍್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾ ಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಕಾರ್ಖಾನೆಯಲ್ಲಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಿತಿಗಿಂತ ವಾಯು, ಜಲಮಾಲಿನ್ಯ ಹೆಚ್ಚಾಗಿರುವುದರಿಂದ 2015ರ ಡಿಸೆಂಬರ್ 31ರೊಳಗೆ ಸರಿಪಡಿಸಿ ಕೊಳ್ಳಲು ಅಂತಿಮ ಸೂಚನೆ ನೀಡಿದೆ. ಈ ಬಗ್ಗೆ ಸರ್ಕಾರ, ಕಾರ್ಖಾನೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

1980ರ ನಂತರ ಕಾರ್ಖಾನೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಇಲ್ಲದೇ, ಆಧುನೀಕರಣಗೊಳ್ಳದೇ  ಇರು ವುದರಿಂದ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಕಾಗದ ಕಡಿಮೆ ದರದಲ್ಲಿ ತಯಾರಿಸಲು ಸಾಧ್ಯವಾಗಿಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನೀಡುವಲ್ಲಿ ಕಾರ್ಖಾನೆ ವಿಫಲವಾಗಿದೆ
ಎಂದರು.

ಹೊಸದಾಗಿ ಬಂದಿರುವ ವ್ಯವಸ್ಥಾಪಕ ನಿರ್ದೇಶಕರು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿರು ವುದರಿಂದ ವಿನಾಕಾರಣ ಕಾರ್ಮಿಕರಲ್ಲಿ ಗೊಂದಲ ಮೂಡಿದೆ. ಕಾರ್ಖಾನೆ ಗೋದಾಮಿನಲ್ಲಿ ಸಂಗ್ರಹಿಸಿರುವ ₹65ಕೋಟಿ ಮೌಲ್ಯದ 13ಸಾವಿರ ಮೆಟ್ರುಕ್ ಟನ್ ಕಾಗದ ಮಾರಾಟ ಮಾಡಿ ಎಲ್ಲಾ ವರ್ಗದ ಕಾರ್ಮಿಕರಿಗೆ ಈ ಹಿಂದಿನಂತೆ 3-4 ತಿಂಗಳ ವೇತನ ಕೊಡಬಹುದಾಗಿದ್ದರೂ ಸಹ ವ್ಯವಸ್ಥಾಪಕ ನಿರ್ದೇಶಕರು ಲೇ- ಆಫ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂ.ಡಿ ಅವರು ವೆಚ್ಚ ಕಡಿಮೆ ಮಾಡುವ ನೆಪದಲ್ಲಿ 30ದಿನ ಕೆಲಸ ಮಾಡಿದರೆ 15ದಿನಗಳ ಸಂಬಳ ನೀಡುವುದು, ಉದ್ಯೋಗಿಗಳ ವಯೋ ಮಿತಿಯನ್ನು 60ರಿಂದ 58 ವರ್ಷಕ್ಕೆ ಕಡಿಮೆ ಮಾಡುವುದಾಗಿ ತಿಳಿಸಿದ್ದಾರೆ. ಮಾಸಿಕ ₹15 ಸಾವಿರ ವೇತನದವರಿಗೆ ಮಾತ್ರ ಭವಿಷ್ಯನಿಧಿಯ ಎಂಪ್ಲಾಯರ್ ವಂತಿಕೆ ಮಿತಿಗೊಳಿಸುವ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಪ್ಪಂದದಲ್ಲಿ ಅಡಕವಾಗಿರುವ ಎಲ್ಲಾ ಭತ್ಯೆಗಳನ್ನು ನಿಲ್ಲಿಸುವುದಾಗಿ ಹಾಗೂ ಹೆಚ್ಚುವರಿಯಾಗುವ ತುಟ್ಟಿಭತ್ಯೆ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಒಳರೋಗಿಯ ವೈದ್ಯಕೀಯ ವೆಚ್ಚ ಮರು ಪಾವತಿಯನ್ನು ಹೃದಯ ಶಸ್ತ್ರಚಿಕಿತ್ಸೆಗೆ ಮಾತ್ರ ಮಿತಿಗೊಳಿಸುವುದು, ಗ್ರಾಚುಯಿಟಿ ಮೊತ್ತವನ್ನು ₹10 ಲಕ್ಷಕ್ಕೆ ಕಡಿಮೆ ಮಾಡುವುದು, ವಿಆರ್ಎಸ್ ಗರಿಷ್ಠ ಮೊತ್ತವನ್ನು ₹8.5ಲಕ್ಷದಿಂದ ₹5ಲಕ್ಷಕ್ಕೆ ಇಳಿಸುವುದಾಗಿ ಕಾರ್ಮಿಕರಿಗೆ ಅನ್ಯಾಯವಾದಂತಾಗುತ್ತದೆ. ಕೂಡಲೇ ಎಂಪಿಎಂ ಅಭಿವೃದ್ಧಿಗೆ ₹315 ಕೋಟಿ  ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಪಿಎಂ ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್. ಶಿವಮೂರ್ತಿ, ಮಂಜಪ್ಪ, ದಾನಂ, ರಾಜಪ್ಪ, ಬಾಬು, ಪ್ರಸನ್ನ ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.