ADVERTISEMENT

ಅಧಿಕಾರಿಗಳ ಲಾಬಿಗೆ ಸ್ಥಗಿತ: ಆರೋಪ

ಎಚ್‌ಎಂಟಿ ಸ್ವಯಂ ನಿವೃತ್ತ ಕಾರ್ಮಿಕರ ಬೀಳ್ಕೊಡುಗೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 5:49 IST
Last Updated 12 ಜನವರಿ 2017, 5:49 IST
ತುಮಕೂರು ಸಿದ್ದಗಂಗಾ ಮಠದಲ್ಲಿ ಬುಧವಾರ ಎಚ್‌ಎಂಟಿ ವಾಚ್‌ ಫ್ಯಾಕ್ಟರಿ ಎಂಪ್ಲಾಯಿಸ್‌ ಯೂನಿಯನ್‌ ಆಯೋಜಿಸಿದ್ದ ಸ್ವಯಂ ನಿವೃತ್ತ ಕಾರ್ಮಿಕರಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಚ್‌ಎಂಟಿ ಒಕ್ಕೂಟದ ರಾಷ್ಟ್ರೀಯ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಚಂದ್ರಶೇಖರ್‌ ಉದ್ಘಾಟಿಸಿದರು
ತುಮಕೂರು ಸಿದ್ದಗಂಗಾ ಮಠದಲ್ಲಿ ಬುಧವಾರ ಎಚ್‌ಎಂಟಿ ವಾಚ್‌ ಫ್ಯಾಕ್ಟರಿ ಎಂಪ್ಲಾಯಿಸ್‌ ಯೂನಿಯನ್‌ ಆಯೋಜಿಸಿದ್ದ ಸ್ವಯಂ ನಿವೃತ್ತ ಕಾರ್ಮಿಕರಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಚ್‌ಎಂಟಿ ಒಕ್ಕೂಟದ ರಾಷ್ಟ್ರೀಯ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಚಂದ್ರಶೇಖರ್‌ ಉದ್ಘಾಟಿಸಿದರು   

ತುಮಕೂರು: ‘ವ್ಯವಸ್ಥೆಯ ಲೋಪ, ಐಎಎಸ್‌ ಅಧಿಕಾರಿಗಳ ಲಾಬಿಯಿಂದ ಎಚ್‌ಎಂಟಿ ಕಾರ್ಖಾನೆ ಕಾರ್ಯಸ್ಥಗಿತವಾಯಿತೆ ವಿನಾ ಸ್ಪರ್ಧೆಯ ಕಾರಣಕ್ಕಲ್ಲ’ ಎಂದು ಎಚ್‌ಎಂಟಿ ಒಕ್ಕೂಟದ ರಾಷ್ಟ್ರೀಯ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಚಂದ್ರಶೇಖರ್‌ ಹೇಳಿದರು.

ನಗರದ ಸಿದ್ದಗಂಗಾ ಮಠದ ಉದ್ಧಾನೇಶ್ವರ ಸಮುದಾಯಭವನದಲ್ಲಿ ತುಮಕೂರು ಎಚ್‌ಎಂಟಿ ವಾಚ್‌ ಫ್ಯಾಕ್ಟರಿ ಎಂಪ್ಲಾಯಿಸ್‌ ಯೂನಿಯನ್‌ ಆಯೋಜಿಸಿದ್ದ ಸ್ವಯಂ ನಿವೃತ್ತ ಕಾರ್ಮಿಕರಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘1984ರಿಂದಲೂ ತುಮಕೂರು ಎಚ್‌ಎಂಟಿ ಕಾರ್ಖಾನೆ ಜತೆಗಿನ ನೆನಪುಗಳು ಕಾಡುತ್ತಿವೆ. ನೂರಾರು ಕಾರ್ಮಿಕರಿಗೆ ಆಶ್ರಯ ನೀಡಿದ ಕೊಟ್ಟ ಕಾರ್ಖಾನೆ ಈಗ ಮುಚ್ಚಿದೆ. ತಾಯಿಯಿಂದ ಮಕ್ಕಳನ್ನು ದೂರ ಮಾಡಿದಂತೆ ಭಾಸವಾಗುತ್ತಿದೆ’ ಎಂದು ಹೇಳಿದರು.

‘ತುಮಕೂರು ಮಹಾನಗರ ಸ್ಮಾರ್ಟ್‌ ಸಿಟಿಯಾಗಿ ಬೆಳೆಯಲು ಪ್ರಮುಖ ಕಾರಣ ಎಚ್‌ಎಂಟಿ ಕಾರ್ಖಾನೆ. ಲಲಿತ ಕಲಾ ಸಂಘ, ಕ್ರೀಡಾ ಸಂಘಗಳಲ್ಲಿ ನೌಕರರು ಮಾಡಿದ ಸಾಧನೆ,ಕಾರ್ಖಾನೆಯ ಅಭಿವೃದ್ಧಿ ಎಲ್ಲವೂ ನೆನಪಾಗುತ್ತಿದೆ. 1984ರಿಂದ 92ರ ಅವಧಿ ಸುವರ್ಣಯುಗವಾಗಿತ್ತು’ ಎಂದರು.

‘ಕೇಂದ್ರ ಸರ್ಕಾರದಲ್ಲಿ ಎಚ್‌ಎಂಟಿ ಬಗ್ಗೆ ಯಾರಲ್ಲೂ ಹೊಣೆಗಾರಿಕೆ ಇರಲಿಲ್ಲ. ಕೆಲ ಅಧಿಕಾರಿಗಳ ಷಡ್ಯಂತ್ರದಿಂದ ಅವನತಿ ಹೊಂದಿತು’ ಎಂದು ಆರೋಪಿಸಿದರು.
‘ಎಚ್‌ಎಂಟಿ ಕಾರ್ಖಾನೆ ಖಾಸಗಿ ಕಂಪೆನಿಗಳೊಂದಿಗೆ ಸ್ಪರ್ಧೆಗಿಳಿಯಲು ಸಾಧ್ಯವಾಗದೇ ಮುಚ್ಚಿತು ಎಂದು ಮಾಧ್ಯಮಗಳು ಬರೆದವು. ಆದರೆ, ಅದು ವಾಸ್ತವವಲ್ಲ. ಕಾರ್ಖಾನೆಯಲ್ಲಿ ಇದ್ದ ಇತಿಮಿತಿಗಳು, ಅಧಿಕಾರಿಗಳ ಕುತಂತ್ರದಿಂದ ಸ್ಪರ್ಧಿಸಲಾಗಿಲ್ಲ’ ಎಂದರು.

‘ಜೀವನದ ಹೆಚ್ಚು ಸಮಯ ಕಳೆದ ಕಾರ್ಖಾನೆಯನ್ನು ಬಿಟ್ಟಿರಲು ಕಷ್ಟವಾಗುತ್ತಿದೆ. ಎಚ್‌ಎಂಟಿ ಜಾಗದಲ್ಲಿ ಯಾವುದೇ ಸಂಸ್ಥೆ ಆರಂಭವಾದರೂ ಎಚ್‌ಎಂಟಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಅದಕ್ಕಾಗಿ ಈಗಿನಿಂದಲೇ ಹೋರಾಟ ಮಾಡಬೇಕು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತುಮಕೂರನ್ನು ಔದ್ಯೋಗಿಕ ನಗರವನ್ನಾಗಿ ಮಾಡಿದ ಕೀರ್ತಿ ಎಚ್‌ಎಂಟಿಗೆ ಸಲ್ಲಬೇಕು. ದೇಶದ ಭೂಪಟದಲ್ಲಿ ತುಮಕೂರಿಗೆ ಸ್ಥಾನ ತಂದುಕೊಟ್ಟಿದ್ದಲ್ಲದೇ ಉದ್ಯೋಗದ ಕನಸು ನನಸು ಮಾಡಿತು. ಅಂದು ಅಸ್ತಿತ್ವಕ್ಕಾಗಿ ಹೋರಾಡಿದ ತುಮಕೂರು ಈಗ ಬೆಂಗಳೂರಿಗೆ ಸಮಸಮನಾಗಿ ಬೆಳೆಯಲು ಕಾರಣೀಭೂತವಾಯಿತು’ ಎಂದು ಹೇಳಿದರು.

ಜಿಟಿಎಂ ಸಿಎಸ್‌ಡಿ ಅಧ್ಯಕ್ಷ ಎಂ.ಆರ್‌.ವಿ.ರಾಜ, ಬಿ.ಎಂ.ಶಿವಶಂಕರ್‌, ಡಾ. ಅಲೆಕ್ಸಾಂಡರ್‌ ಜೋಸೆಫ್‌ ಗೋನಿ, ಶಂಕರಲಿಂಗಪ್ಪ, ಕೆ.ಎನ್‌. ಸತ್ಯನಾರಾಯಣ, ಜಿ.ವಿ.ವೆಂಕಟೇಶ್‌, ಟಿ.ಎನ್‌. ರಂಗನಾಥ್‌  ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.