ADVERTISEMENT

ಉದ್ಯಮಿಗಳ ತೇಜೋವಧೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 6:36 IST
Last Updated 12 ಡಿಸೆಂಬರ್ 2017, 6:36 IST

ತುಮಕೂರು: ‘ಉದ್ಯಮಿಗಳಾದ ರವಿಶಂಕರ್ ಹೆಬ್ಬಾಕ ಮತ್ತು ನಾಗೇಶ್ ಬಾವಿಕಟ್ಟೆ ಅವರ ಮೇಲೆ ಈಚೆಗೆ ಬಿಟಿವಿ ವರದಿಗಾರ ವಾಗೀಶ್ ಅವರು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಪ್ರಜ್ಞಾವಂತ ನಾಗರಿಕ ವೇದಿಕೆಯು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ‘ಹಲ್ಲೆ ನಡೆಸಿದ ಬಳಿಕ ಮಾಧ್ಯಮ ಕ್ಷೇತ್ರದ ಹಿರಿಯರು ರಾಜಿ ಸಂಧಾನ ಮಾಡಲು ಯತ್ನಿಸಿದರೂ ಅವರ ಮಾತಿಗೆ ಕಿವಿಗೊಡದೇ ಪೊಲೀಸ್ ಠಾಣೆಯಲ್ಲಿ ರವಿಶಂಕರ್ ಮತ್ತು ನಾಗೇಶ್ ಬಗ್ಗೆ ದೂರು ನೀಡಿದ್ದಾರೆ. ಗೂಂಡಾ, ರೌಡಿ ಮುಂತಾದ ಪದ ಬಳಸಿ ತೇಜೋವಧೆ ಮಾಡಿದ್ದಾರೆ’ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ವಾಗೀಶ್ ಮಾಡಿರುವ ಹಲ್ಲೆ, ಬಿಟಿವಿಯವರು ಮಾಡಿರುವ ತೇಜೋವಧೆ, ದೌರ್ಜನ್ಯವನ್ನು ಖಂಡನೀಯವಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ADVERTISEMENT

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಮಹತ್ವದ್ದಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಅದರ ಪಾತ್ರ  ಬಹುಮುಖ್ಯವಾದುದು. ಸಮಾಜದಲ್ಲಿನ ಅಂಕು ಡೊಂಕುಗಳನ್ನ ತಿದ್ದಿ ಅಧಿಕಾರಸ್ಥರನ್ನು ಎಚ್ಚರಿಸಬೇಕು. ತುಳಿತಕ್ಕೊಳಗಾದವರಿಗೆ, ಅಶಕ್ತರಿಗೆ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು.

ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ಕರ್ತವ್ಯ ಶ್ಲಾಘನೀಯ. ಆದರೆ, ಕೆಲವರು ಪೂರ್ವಗ್ರಹ ಪೀಡಿತರು, ಸ್ವಾರ್ಥಿಗಳುಈ ಕ್ಷೇತ್ರಕ್ಕೆ ಕಳಂಕ ಬರುವ ರೀತಿ ವರ್ತಿಸುತ್ತಿರುವುದು ವಿಷಾದನೀಯ ಎಂದರು.

ಬೆಳ್ಳಾವಿ ಕಾರದಮಠದ ಕಾರದ ವೀರಬಸವ ಸ್ವಾಮೀಜಿ, ರುದ್ರಾನಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗೋಡೆಕೆರೆಯ ಮೃತ್ಯುಂಜಯಸ್ವಾಮಿ ದೇಶಿಕೇಂದ್ರ ಸ್ವಾಮೀಜಿ, ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿಮಠದ ಬಸವಲಿಂಗ ಸ್ವಾಮೀಜಿ, ರೇಮೇನಹಳ್ಳಿಯ ಶಿವ ಪಂಚಾಕ್ಷರಿ ಸ್ವಾಮೀಜಿ, ಬಿಜೆಪಿ ಮುಖಂಡ ಜಿ.ಎಸ್.ಬಸವರಾಜ್ ಮುಂತಾದವರು ಮಾತನಾಡಿದರು.

ಮುಖಂಡರಾದ ವೀರಭದ್ರಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಜಗನ್ನಾಥ್, ಚಂದ್ರಶೇಖರಬಾಬು, ಅಯಾಜ್ ಅಹಮ್ಮದ್, ಪ್ರೊ.ಚಂದ್ರಕಾಂತ, ವಕೀಲರಾದ ಲೋಕೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್, ಊರುಕೆರೆ ಉಮೇಶ್, ವಿನಯ್ ಬಾವಿಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.