ADVERTISEMENT

ಕಾಲೇಜಿನಲ್ಲಿ ಕ್ಯಾಂಟೀನ್ ಆರಂಭಕ್ಕೆ ಬಿಜೆಪಿ ಮುಖಂಡರ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 8:55 IST
Last Updated 16 ಸೆಪ್ಟೆಂಬರ್ 2017, 8:55 IST

ಬಂಗಾರಪೇಟೆ: ಪಟ್ಟಣದ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಎಸ್.ಎನ್.ಕ್ಯಾಂಟೀನ್ ತೆರೆಯಲು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕ್ಯಾಂಟೀನ್ ಉದ್ಘಾಟನೆ ಮುಂದೂಡಲಾಯಿತು.

ಕಾಲೇಜು ಆವರಣದಲ್ಲಿ ಎಸ್.ಎನ್.ಟ್ರಸ್ಟ್‌ನಿಂದ ಎಸ್.ಎನ್.ಕ್ಯಾಂಟೀನ್ ತೆರೆದು ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ತಿಂಡಿ, ಊಟ, ಕಾಫಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಿದ್ದತೆ ನಡೆದಿತ್ತು. ಇದಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಯಾಂಟೀನ್ ತೆರೆಯಲು ಮುಂದಾಗಿದ್ದಾರೆ.

ಇದಕ್ಕೆ ಅವಕಾಶ ಕೊಡಬಾರದು ಎಂದು ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಸರ್ಕಾರಿ ಕಾಲೇಜು ಆವರಣದಲ್ಲಿ ಸರ್ಕಾರದ ಅನುಮತಿಯೊಂದಿಗೆ ಟೆಂಡರ್ ಪ್ರಕ್ರಿಯೆ ನಡೆಸಿ, ಕ್ಯಾಂಟೀನ್ ತೆರೆಯಬೇಕು. ಇದ್ಯಾವುದೂ ನಡೆದಿಲ್ಲ. ಶಾಸಕರು ತಮ್ಮ ಭಾವ ಚಿತ್ರ ಮತ್ತು ನಾಮಫಲಕ ಹಾಕಿಕೊಂಡು ತಿಂಡಿ ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ದೂರಿದರು.

ADVERTISEMENT

ಶಾಸಕರಿಗೆ ಕ್ಯಾಂಟೀನ್ ತೆರೆಯಲು ಅವಕಾಶ ನೀಡಿದರೆ ನಾವೂ ಸಹ ಮೋದಿ ಹೆಸರಲ್ಲಿ ಕ್ಯಾಂಟೀನ್ ಆರಂಭಿಸುತ್ತೇವೆ. ನಮಗೂ ಅವಕಾಶ ಕೊಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಮತ್ತು ಮುಖಂಡ ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಹೇಳಿದರು. ಸೆ.11ರಂದು ಆರಂಭವಾಗಬೇಕಿದ್ದ ಎಸ್.ಎನ್.ಕ್ಯಾಂಟೀನ್ ಬಿಜೆಪಿ ಮುಖಂಡರ ವಿರೋಧದಿಂದ ಎರಡು ಬಾರಿ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.